ಹೆರಿಗೆಯಾದ ಬಳಿಕ ಮದುವೆ ನಿರಾಕರಿಸಿದ ಪ್ರಿಯತಮ: ದೂರು

Update: 2016-12-06 18:33 GMT

ಕಾರ್ಕಳ, ಡಿ.6: ಮದುವೆಯಾಗುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕಮಾಡಿ ಹೆರಿಗೆಯಾದ ಬಳಿಕ ಮದುವೆಯಾಗಲು ನಿರಾಕರಿಸಿದ ಘಟನೆ ತಾಲೂಕಿನ ಬೈಲೂರು ಗ್ರಾಮದಲ್ಲಿ ನಡೆದಿದ್ದು, ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ನಿವಾಸಿ ಎಬ್‌ನೇಝರ್ ಸದಾನಂದ ಅಂಚನ್ ಎಂಬವರ ಪುತ್ರಿ ಕ್ಲೇಮಿಂಟನಾ ಹೇಮಲತಾ(24) ವಂಚನೆಗೊಳಗಾದವರು. ನೀರೆ ಗ್ರಾಪಂ ಸದಸ್ಯ ಹಾಗೂ ರಿಕ್ಷಾ ಚಾಲಕ ಶರತ್ ಶೆಟ್ಟಿ (28) ವಂಚಿಸಿದ ಆರೋಪಿ. ಯುವತಿ ನ.28ರಂದು ಮಣಿಪಾಲ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆರೋಪಿ ಶರತ್ ಶೆಟ್ಟಿ ಪರಾರಿಯಾಗಿದ್ದಾನೆ. ಮಣಿಪಾಲದಲ್ಲಿ ದಾದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಕ್ಲೇಮಿಂಟನಾ ಹೇಮಲತಾ ಮತ್ತು ರಿಕ್ಷಾ ಚಾಲಕ ಶರತ್ ಶೆಟ್ಟಿ ನಡುವೆ ಒಂದು ವರ್ಷದ ಹಿಂದೆ ಪರಸ್ಪರ ಪರಿಚಯವಾಗಿದ್ದು ಬಳಿಕ ವಿವಾಹವಾಗುವುದಾಗಿಯೂ ತೀರ್ಮಾನಿಸಿದ್ದರು ಎಂದು ತಿಳಿದು ಬಂದಿದೆ.

 ಯುವತಿಯ ತಂದೆ ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದು, ತಾಯಿ ಸೂಲಗಿತ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಕೆಲಸದ ನಿಮಿತ್ತ ಸೂಲಗಿತ್ತಿಯಾಗಿ ಒಂದು ಮನೆಗೆ ತೆರಳಿದರೆ, ವಾಪಸಾಗುವ ವೇಳೆ ತಿಂಗಳು ಕಳೆಯುತ್ತಿತ್ತು. ಯುವತಿಯ ಸಹೋದರಿ ಶಿಕ್ಷಕಿಯಾಗಿ ಉಡುಪಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮಣಿಪಾಲದಲ್ಲಿ ದಾದಿಯಾಗಿ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿಯ ಮನೆಯಲ್ಲಿ ಹಗಲಲ್ಲಿ ಯಾರೂ ಇರುತ್ತಿರಲಿಲ್ಲ. ಇದೇ ಸಂದರ್ಭವನ್ನು ಬಳಸಿಕೊಂಡ ಶರತ್ ಶೆಟ್ಟಿ, ನಿತ್ಯ ಆಕೆಯ ಮನೆಗೆ ತೆರಳುತ್ತಿದ್ದ. ಗರ್ಭವತಿಯಾದ ಬಳಿಕವೂ ಮದುವೆಯಾಗುವ ಭರವಸೆ ನೀಡಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

 ಆದರೆ ಇದೀಗ ಹೆರಿಗೆಯಾದ ಬಳಿಕ ಶರತ್ ಶೆಟ್ಟಿ ಪರಾರಿಯಾಗಿದ್ದಾನೆ ಎಂದವರು ಆರೋಪಿಸಿ ದೂರು ನೀಡಿದ್ದಾರೆ. ಯುವತಿಯ ತಂದೆ ಎಬ್‌ನೇಝರ್ ಸದಾನಂದ ಅಂಚನ್ ಶರತ್ ಶೆಟ್ಟಿಯನ್ನು ಮನೆಗೆ ಕರೆಸಿಕೊಂಡು, ಮಗಳನ್ನು ವಿವಾಹವಾಗುವಂತೆ ಎಚ್ಚರಿಸಿದ್ದರೆಂದು ತಿಳಿದು ಬಂದಿದೆ.

ಶರತ್ ಶೆಟ್ಟಿ ಮಾಡಿದ ತಪ್ಪು ಒಪ್ಪಿಕೊಂಡಿದ್ದು, ಆಕೆಯನ್ನು ವಿವಾಹ ವಾಗುವುದಾಗಿ ಹೇಳಿದ್ದ ಎನ್ನಲಾಗಿದೆ. ಶರತ್ ಶೆಟ್ಟಿ ಸಂಬಂಧಿಕರೂ ಮದುವೆಗೆ ಒಪ್ಪಿದ್ದರು ಎನ್ನಲಾಗಿದೆ. ಆದರೆ ಡಿ.2ರಂದು ಮದುವೆ ನೋಂದಾವಣೆಗೆ ತಯಾರಿ ನಡೆಸುತ್ತಿದ್ದಂತೆ, ಆತ ಮದುವೆಗೆ ನಿರಾಕರಿಸಿದ್ದಲ್ಲದೆ, ಮೊಬೈಲ್ ಸ್ವಿಚ್-ಆಪ್ ಮಾಡಿ ತಲೆ ಮರೆಸಿಕೊಂಡಿದ್ದಾನೆ ಎಂದು ದೂರಿನಲ್ಲಿ ಯುವತಿ ತಿಳಿಸಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೃತ್ತ ನಿರೀಕ್ಷಕ ಜೋಯ್ ಅಂತೋನಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News