ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪ

Update: 2016-12-07 04:40 GMT

ಸಿಗ್ಲಿ,ಡಿ.7: ಇಂಡೋನೇಷ್ಯಾದ ಉತ್ತರ ಸುಮಾತ್ರದ ಬಾಂದಾ ಅಚ್ ಪ್ರದೇಶದಲ್ಲಿ ಭೀಕರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ತೀವ್ರತೆ 6.8ರಷ್ಟಿತ್ತು ಎಂದು ಅಮೆರಿಕದ ಜಿಯೊಗ್ರಾಫಿಕಲ್ ಸರ್ವೆ (ಯುಎಸ್‌ಜಿಎಸ್) ಪ್ರಕಟಿಸಿದೆ.

ಭೂಕಂಪವು ಸುಮಾರು 33 ಕಿಲೋಮೀಟರ್ ಆಳದಲ್ಲಿ ಸ್ಥಳೀಯ ಕಾಲಮಾನದ ಪ್ರಕಾರ ಮುಂಜಾನೆ 5.03ಕ್ಕೆ ಸಂಭವಿಸಿದೆ ಎಂದು ಯುಎಸ್‌ಜಿಎಸ್ ಹೇಳಿದೆ. ಭೂಕಂಪದ ಹಿನ್ನೆಲೆಯಲ್ಲಿ ಇಂಡೋನೇಷ್ಯಾದಲ್ಲಿ ಸುನಾಮಿ ಮುನ್ನೆಚ್ಚರಿಕೆಯನ್ನು ಇದುವರೆಗೆ ನೀಡಿಲ್ಲ.

ಹಿಂದೂಮಹಾಸಾಗರದಲ್ಲಿ 2004ರಲ್ಲಿ ಎದ್ದ ಭೀಕರ ಸುನಾಮಿಯಿಂದ ಧ್ವಂಸವಾದ ಆಚ್‌ನ ಬಹುತೇಕ ಕಡೆಗಳಲ್ಲಿ ಭೂಕಂಪದ ಅನುಭವ ಆಗಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ಮುಖ್ಯಸ್ಥ ಎರ್ಡವತಿ ಹೇಳಿದ್ದಾರೆ. ಸಿಗ್ಲಿಯಲ್ಲಿ ಜನರು ಸಮುದ್ರ ದಂಡೆಯ ಮನೆಗಳನ್ನು ಬಿಟ್ಟು, ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಸುನಾಮಿ ಭೀತಿ ಹಿನ್ನೆಲೆಯಲ್ಲಿ ತಿಜೂ ಪ್ರದೇಶದ ಜನರನ್ನೂ ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ತಕ್ಷಣಕ್ಕೆ ಯಾವುದೇ ಜೀವಹಾನಿ ವರದಿಯಾಗಿಲ್ಲ. ಆದರೆ ಪಿಡೀ ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಬಿರುವೆನ್ ಜಿಲ್ಲೆಯ ವಿಶ್ವವಿದ್ಯಾನಿಲಯಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಭೂಕಂಪದ ಬಳಿಕ ಸುಮಾರು ಐದು ಬಾರಿ ಲಘು ಕಂಪನದ ಅನುಭವ ಆಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News