ಜನರನ್ನು ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಬ್ಯಾಂಕ್ ಗಾರ್ಡ್ !
ಹೊಸದಿಲ್ಲಿ, ಡಿ. 7 : ಪಂಜಾಬ್ ನ ಬ್ಯಾಂಕ್ ಒಂದರ ಹೊರಗೆ ಹಣ ಪಡೆಯಲು ಸೇರಿದ್ದ ಜನರನ್ನು ಚದುರಿಸಲು ಬ್ಯಾಂಕ್ ಗಾರ್ಡ್ ಒಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಡೆದಿದೆ.
ಇಲ್ಲಿನ ಮನ್ಸ ಜಿಲ್ಲೆಯ ಬುದ್ಲದ ಎಂಬಲ್ಲಿನ ಎಚ್ ಡಿ ಎಫ್ ಸಿ ಬ್ಯಾಂಕ್ ಹೊರಗೆ ದೊಡ್ಡ ಸಂಖ್ಯೆಯಲ್ಲಿ ಜನರು ನಿಂತುಕೊಂಡು ಬ್ಯಾಂಕ್ ಒಳಗೆ ಹೋಗಲು ಕಾಯುವ ವೀಡಿಯೊ ಹಿಂದೂಸ್ತಾನ್ ಟೈಮ್ಸ್ ಹಾಕಿದೆ. ಕಾದು ಕಾದು ಜನರ ಗುಂಪು ಸಹನೆ ಕಳೆದುಕೊಂಡಾಗ ಅವರನ್ನು ಬೆದರಿಸಲು ಬ್ಯಾಂಕಿನ ಗಾರ್ಡ್ ಕನಿಷ್ಠ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ ( ಇದು ವೀಡಿಯೊ ದಲ್ಲಿ ಕಾಣುವುದಿಲ್ಲ). ಗುಂಡಿನ ಶಬ್ದ ಕೇಳಿದ ಕೂಡಲೇ ಜನರು ಬ್ಯಾಂಕಿನಿಂದ ದೂರ ಓಡುತ್ತಾರೆ. ಬುಲೆಟ್ ಅಪ್ಪಿ ತಪ್ಪಿ ಯಾರಿಗಾದರೂ ತಾಗಬಹುದು ಎಂದು ವ್ಯಕ್ತಿಯೊಬ್ಬ ಹೇಳುವುದು ವೀಡಿಯೋದಲ್ಲಿ ಕೇಳುತ್ತದೆ.
ಎಫ್ ಐ ಆರ್ ದಾಖಲಾಗಿದ್ದು ಯಾರೂ ಗಾಯಗೊಂಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ದೇಶಾದ್ಯಂತ ಬ್ಯಾಂಕುಗಳಲ್ಲಿ ಹೊಸ ನೋಟುಗಳ ತೀವ್ರ ಕೊರತೆ ಎದ್ದು ಕಾಣುತ್ತಿದ್ದು ಹಣಕ್ಕಾಗಿ ಜನರು ಹಾಹಾಕಾರ ನಡೆಸುವ ಪರಿಸ್ಥಿತಿ ಅಲ್ಲಲ್ಲಿ ವರದಿಯಾಗುತ್ತಿದೆ.
Watch: Bank guard fired shots in air at HDFC, Budhlada, Punjab. 1st shot fired at 36th second, few more after that. Day 28, #Demonetisation. pic.twitter.com/F1Sv69ZokF
— Pratik Sinha (@free_thinker) December 6, 2016