ಈ ಸದನವನ್ನು ನಡೆಸುವವರು ಯಾರು ಇಲ್ಲವೇ ? : ಕೇಂದ್ರದ ವಿರುದ್ಧ ಅಡ್ವಾಣಿ ಗರಂ
ಹೊಸದಿಲ್ಲಿ, ಡಿ.7: ಈ ಸದನವನ್ನು ಮುನ್ನಡೆಸುವವರು ಯಾರು? ಸಂಸದ್ ಕಲಾಪವನ್ನು ನಿಯಂತ್ರಿಸುವವರಿಲ್ಲ. ಅದರಷ್ಟಕ್ಕೇ ಸಾಗುತ್ತಿದೆ. ಸ್ಪೀಕರ್ (ಸುಮಿತ್ರಾ ಮಹಾಜನ್) ಅಥವಾ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಸದನವನ್ನು ಮುನ್ನೆಡುತ್ತಿಲ್ಲ ....
ಹೀಗೆಂದು ಕೋಪಾವಿಷ್ಟರಾಗಿ ಪ್ರಶ್ನಿಸಿದವರು 89ರ ಹರೆಯದ ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ.
ವಿಪಕ್ಷಗಳು ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಗದ್ದಲ ಎಬ್ಬಿಸಿದ ಕಾರಣ ಲೋಕಸಭೆಯ ಕಲಾಪ ಭೋಜನ ವಿರಾಮಕ್ಕೆ ಮುನ್ನ ಮತ್ತೆ ಮುಂದೂಡಲ್ಪಟ್ಟಾಗ ಬಿಜೆಪಿಯ ಹಿರಿಯ ಮುಖಂಡ ಅಡ್ವಾಣಿಯರು ತಾಳ್ಮೆ ಕಳೆದುಕೊಂಡರು. ಈ ವೇಳೆ ಸಚಿವ ಅನಂತಕುಮಾರ್ ತಮ್ಮ ಹಿರಿಯ ಮುಖಂಡರನ್ನು ಸಮಾಧಾನಗೊಳಿಸಲು ಯತ್ನಿಸಿದರು. ಸ್ಪೀಕರ್ ಆಸನದ ಮೇಲಿನ ಸಾಲಿನಲ್ಲಿರುವ ಪತ್ರಕರ್ತರ ಗ್ಯಾಲರಿಯತ್ತ ಕೈ ತೋರಿಸಿ- ಜನರು ಗಮನಿಸುತ್ತಿದ್ದಾರೆ ಎಂದರು. ಇದರಿಂದ ಸಮಾಧಾನಗೊಳ್ಳದ ಅಡ್ವಾಣಿ, ಈ ಮಾತುಗಳನ್ನು ಸಾರ್ವಜನಿಕರೆದುರು ಹೇಳುತ್ತೇನೆ. ಸ್ಪೀಕರ್‌ಗೂ ಹೇಳುತ್ತೇನೆ ...ಎರಡೂ ಕಡೆಯವರು ಇದರಲ್ಲಿ ಭಾಗೀದಾರರು ಎಂದರು ಕೋಪದಿಂದ. ಸ್ಪೀಕರ್ ಸದನವನ್ನು ಮುಂದೂಡಿದಾಗ , ಎಷ್ಟು ಸಮಯ ಮುಂದೂಡಲಾಗಿದೆ ಎಂದು ಲೋಕಭೆಯ ಅಧಿಕಾರಿಗಳನ್ನು ಪ್ರಶ್ನಿಸಿದರು. ಅನಿರ್ಧಿಷ್ಟಾವಧಿ ಮುಂದೂಡಬಹುದಿತ್ತಲ್ಲಾ ಎಂದು ಗೊಣಗುತ್ತಿರುವುದು ಕೇಳಿಸಿತು. ಸದನ ಭೋಜನ ವಿರಾಮಕ್ಕಾಗಿ ಮುಂದೂಡಲ್ಪಟ್ಟಾಗ ಯಾರಲ್ಲೂ ಮಾತನಾಡದೆ ಅಡ್ವಾಣಿ ವೌನವಾಗಿ ಹೊರಟು ನಿಂತರು. ಸದನದ ಕಲಾಪಕ್ಕೆ ನಿರಂತರ ಅಡ್ಡಿಯಾಗುತ್ತಿರುವ ಕಾರಣ ಹಿರಿಯ ಸಂಸದೀಯ ನಾಯಕರೋರ್ವರ ಕಳವಳ ಮತ್ತು ನೋವು ಹೊರಬಂದಿರುವ ರೀತಿ ಇದು ಎಂದು ಸಚಿವ ವೆಂಕಯ್ಯ ನಾಯ್ಡು ಪ್ರತಿಕ್ರಿಯಿಸಿದರು. ಇದಕ್ಕೂ ಮೊದಲು ಕೂಡಾ ಸದನದ ಕಲಾಪ ಸಾಗುತ್ತಿರುವ ರೀತಿಯ ಬಗ್ಗೆ ಅಡ್ವಾಣಿ ಸಚಿವ ಅನಂತಕುಮಾರ್ ಅವರಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.