ಡೆಬಿಟ್‌ಕಾರ್ಡ್ ಪಾಸ್‌ವರ್ಡ್ ಪಡೆದು ವಂಚನೆ

Update: 2016-12-07 11:54 GMT

ಪುತ್ತೂರು, ಡಿ.7 :   ಬ್ಯಾಂಕ್ ಖಾತೆಯಲ್ಲಿ ಲೋಪವಿದೆ ಎಂದು ನಂಬಿಸಿ ಅಪರಿಚಿತ ವ್ಯಕ್ತಿಯೊಬ್ಬರು ಡೆಬಿಟ್ ಕಾರ್ಡಿನ ಪಾಸ್‌ವರ್ಡ್ ನಂಬರ್ ಪಡೆದುಕೊಂಡು ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ ರೂ. 24,899 ನ್ನು ಡ್ರಾ ಮಾಡಿಕೊಂಡು ವಂಚಿಸಿದ ಘಟನೆ  ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರು ತಾಲ್ಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಅಲೆಂಜೆ ಭಾರತಿ ನಿಲಯದ ನಿವಾಸಿ ಬಾಲಕೃಷ್ಣ ಗೌಡ ಅವರ ಪತ್ನಿ ಮೋಹಿನಿ ಅವರು ವಂಚನೆಗೊಳಗಾದ ಮಹಿಳೆ.

ಪುತ್ತೂರಿನ ನೆಹರೂ ನಗರದಲ್ಲಿರುವ ಕೆನರಾ ಬ್ಯಾಂಕಿನಲ್ಲಿ ತನ್ನ ಖಾತೆಯಿದ್ದು, ಮಂಗಳವಾರ ತನಗೆ ದೂರವಾಣಿ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬರು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಲೋಪವಿದೆ. ದಾಖಲೆ ಪತ್ರಗಳು ಸರಿಯಾಗಿಲ್ಲ ಎಂದು ನಂಬಿಸಿ ಅದನ್ನು ಸರಿಪಡಿಸಲು ಡೆಬಿಟ್‌ಕಾರ್ಡ್‌ನ ಪಾಸ್‌ವರ್ಡ್ ನೀಡುವಂತೆ ತಿಳಿಸಿದ್ದರು.

ಅದರಂತೆ ತಾನು ಅವರಿಗೆ ಡೆಬಿಟ್ ಕಾರ್ಡ್‌ನ ಪಾಸ್‌ವರ್ಡ್ ನೀಡಿದ್ದು, ಅದನ್ನು ಬಳಸಿಕೊಂಡು ತನ್ನ ಬ್ಯಾಂಕ್ ಖಾತೆಯಲ್ಲಿದ್ದ ರೂ. 24,899 ಅನ್ನು ಡ್ರಾ ಮಾಡಿಕೊಂಡು ವಂಚಿಸಲಾಗಿದೆ ಎಂದು ಮೋಹಿನಿ ಅವರು ಪುತ್ತೂರು ನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಗೃತಿಯ ನಡುವೆಯೇ ವಂಚನೆ....!!!

ಒಂದೆಡೆಯಲ್ಲಿ ರಿಸರ್ವ್ ಬ್ಯಾಂಕ್ ಮತ್ತು ಪೊಲೀಸ್ ಇಲಾಖೆಯವರು ಸರ್ಕಾರದ ಸಹಭಾಗಿತ್ವದಲ್ಲಿ ಹಣಕಾಸು ವಂಚನೆಯ ಕುರಿತು ಜನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕುವ ಪ್ರಯತ್ನ ನಡೆಸುತ್ತಿದ್ದರೂ, ಇನ್ನೊಂದೆಡೆಯಲ್ಲಿ ಇಂತಹ ವಂಚನೆ ಪ್ರಕರಣಗಳು ನಡೆಯುತ್ತಲೇ ಸಾಗಿದೆ.

 ಬ್ಯಾಂಕ್ ಖಾತೆ ನಂಬ್ರ, ಎಟಿಎಂ ನಂಬ್ರದ ಪಾಸ್‌ವರ್ಡ್ ಪಡೆದುಕೊಂಡು ವಂಚಿಸುವ, ಇಂಟರ್ ನೆಟ್ ಜಾಲದ ಮೂಲಕ ವಂಚಿಸುವ ಜಾಲಗಳು ತುಂಬಿಕೊಂಡಿದ್ದರೂ, ವಂಚನೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ಜನತೆ ಇನ್ನೂ ಜಾಗೃತರಾಗಿಲ್ಲ. ಹಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಇನ್ನಷ್ಟು ಹೆಚ್ಚಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News