×
Ad

ಹರೇಕಳ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಸವಲತ್ತು ವಿತರಣೆ

Update: 2016-12-07 19:32 IST

ಕೊಣಾಜೆ, ಡಿ.7 : ಹರೇಕಳ ಗ್ರಾಮ ಪಂಚಾಯಿತಿಯ 25 ಶೇ. ಮೀಸಲು ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಅಡುಗೆ ಅನಿಲ ಹಾಗೂ ನೀರಿನ ಟ್ಯಾಂಕ್ ವಿತರಣಾ ಸಮಾರಂಭ ಬುಧವಾರ ನಡೆಯಿತು.

 ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಮಲಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ನಿಟ್ಟಿನಲ್ಲಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಈ ಸಮುದಾಯದ ಜನರು ಪಂಚಾಯಿತಿಯಲ್ಲಿ ಮಾಹಿತಿ ಪಡೆದು ಸವಲತ್ತುಗಳ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಹರೇಕಳ ಗ್ರಾಮ 15 ವರ್ಷಗಳ ಹಿಂದೆ ಇದ್ದ ಸ್ಥಿತಿಗೂ ಇಂದಿನ ಸ್ಥಿತಿಗೂ ಸಾಕಷ್ಟು ವ್ಯತ್ಯಾಸಗಳಾಗಿವೆ, ಹಿಂದೆ ಅಮಸರ್ಪಕ ರಸ್ತೆಯಿಂದ ಜನ ದೋಣಿಯನ್ನು ಬಳಸುತ್ತಿದ್ದರು, ಆದರೆ ಇಂದು ಶಾಸಕರು ಹಾಗೂ ವಿವಿಧ ಜನಪ್ರತಿನಿಧಿಗಳ ಸಹಕಾರದಿಂದ ಗಲ್ಲಿಗಳಲ್ಲೂ ಉತ್ತಮ ರಸ್ತೆ ನಿರ್ಮಾಣವಾಗಿದ್ದು ಗ್ರಾಮ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಮೋಹನ್‌ದಾಸ್ ಶೆಟ್ಟಿ ಉಳಿದೊಟ್ಟು ಮಾತನಾಡಿ, ಸರ್ಕಾರದ ಯೋಜನೆಯಂತೆ ಗ್ರಾಮ ಪಂಚಾಯಿತಿ ಅರ್ಹ ಫಲಾನುಭವಿಗಳನ್ನು ಹುಡುಕಿ ಅಗತ್ಯ ವಸ್ತುಗಳನ್ನು ನೀಡಿದ್ದು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು.

 ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯೆ ಶಶಿಪ್ರಭಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಎಸ್.ಕರೀಂ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹಾಬಲ ಹೆಗ್ಡೆ, ಸದಸ್ಯರಾದ ಮಹಮ್ಮದ್ ಶಾಲಿ, ಎಂ.ಪಿ.ಮಜೀದ್ ಆಲಡ್ಕ, ಬಶೀರ್ ಉಂಬುಬ, ಅಶ್ರಫ್‌ಹರೇಕಳ,ದೇವಕಿ, ಮಂಜನಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಅಸೈ, ಅಂಬ್ಲಮೊಗರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.

ಗ್ರಾಮ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News