ಸಾಮೂಹಿಕ ಅತ್ಯಾಚಾರದ ಬಗ್ಗೆ ಟೀಕೆ : ಅಝಂಖಾನ್‌ರ ಕ್ಷಮೆ ಯಾಚನೆ ತಿರಸ್ಕರಿಸಿದ ಸುಪ್ರೀಂಕೋರ್ಟ್
Update: 2016-12-07 19:52 IST
ಹೊಸದಿಲ್ಲಿ, ಡಿ.7: ಸಾಮೂಹಿಕ ಅತ್ಯಾಚಾರ ಪ್ರಕರಣವೊಂದನ್ನು ‘ರಾಜಕೀಯ ಪಿತೂರಿ’ ಎಂದು ಕರೆದುದಕ್ಕಾಗಿ ಸಮಾಜವಾದಿ ಪಕ್ಷದ ನಾಯಕ ಅಝಂಖಾನ್ ಮಾಡಿದ್ದ ಕ್ಷಮಾ ಯಾಚನೆಯನ್ನು ಸುಪ್ರೀಂಕೋರ್ಟ್ ಇಂದು ತಿರಸ್ಕರಿಸಿದೆ. ಅದು ನಿಶ್ಶರ್ತ ಕ್ಷಮಾಯಾಚನೆಯಾಗಿಲ್ಲವೆಂದು ಅದಕ್ಕೆ ನ್ಯಾಯಾಲಯ ಕಾರಣ ನೀಡಿದೆ.
ಜುಲೈಯಲ್ಲಿ ನಡೆದಿದ್ದ ಬುಲಂದ್ ಶಹರ್ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಉತ್ತರಪ್ರದೇಶದ ಎಸ್ಪಿ ಸರಕಾರದ ಹೆಸರು ಕೆಡಿಸಲು ಮಾಡಿದ್ದ ರಾಜಕೀಯ ಪಿತೂರಿಯೆಂದು ಖಾನ್ ಆರೋಪಿಸಿದ್ದರು. ಹೊಸ ಅಫಿದಾವಿತ್‌ನಲ್ಲಿ ತಾನು ಸುಪ್ರೀಂ ಕೋರ್ಟ್ ಆಗ್ರಹಿಸಿರುವಂತೆ ‘ಪಶ್ಚಾತ್ತಾಪ’ ಎಂಬ ಶಬ್ದವನ್‌ಉ ಬಳಸುವೆನೆಂದು ಬಳಿಕ ಅವರು ತಿಳಿಸಿದರು. ಅದಕ್ಕೆ ನ್ಯಾಯಾಲಯ, ನಿಶ್ಶರ್ತ ಕ್ಷಮೆ ಯಾಚನೆಗೆ ‘ಪಶ್ಚಾತ್ತಾಪ’ ಎಂಬುದು ಸಾಕಾದೀತೇ ಎಂಬುದನ್ನು ಪರಿಶೀಲಿಸುವೆನೆಂದು ಹೇಳಿತು. ಮುಂದಿನ ವಿಚಾರಣೆಯನ್ನು ಅದು ಡಿ.15ಕ್ಕೆ ಮುಂದೂಡಿತು.