ಪ್ರಕರಣಕ್ಕೆ ಹೊಸ ತಿರುವು
ಮುಂಬೈ, ಡಿ.7: ಆದಾಯ ಬಹಿರಂಗ ಯೋಜನೆಯನ್ವಯ(ಐಡಿಎಸ್) ಇತ್ತೀಚೆಗೆ ರೂ.2 ಲಕ್ಷ ಕೋಟಿ ಘೋಷಿಸಿದ್ದ ಬಾಂದ್ರಾದ ಕುಟುಂಬವೊಂದರ ನಾಲ್ವರು ಸದಸ್ಯರ ಪಾನ್‌ಕಾರ್ಡ್‌ನ ವಿವರಗಳನ್ನು ದುರುಪಯೋಗಿಸಿರುವ ಸಾಧ್ಯತೆಯಿದೆಯೆಂದು ಆದಾಯ ತೆರಿಗೆ ಅಧಿಕಾರಿಗಳು ಶಂಕಿಸಿದ್ದಾರೆ.
ಅಬ್ದುಲ್‌ರಝಾಕ್ ಮುಹಮ್ಮದ್ ಸೈಯದ್, ಮುಹಮ್ಮದ್ ಆರಿಫ್ ಅಬ್ದುಲ್ ರಝಾಕ್ ಸೈಯದ್, ರುಖ್ಸಾನಾ ಅಬ್ದುಲ್ ರಝಾಕ್ ಸೈಯದ್ ಹಾಗೂ ನೂರ್ ಜಹಾನ್ ಮುಹಮ್ಮದ್ ಸೈಯದ್ ಎಂಬ ಈ ನಾಲ್ವರು ಬಾಂದ್ರಾ(ಪಶ್ಚಿಮ)ದ ಜುಬಿಲಿ ಕೋರ್ಟ್ ನಿವಾಸಿಗಳೆನ್ನಲಾಗಿದೆ. ಅವರಲ್ಲಿ ಮೂವರು ಅಜ್ಮೀರ್‌ನಿಂದ ಪಾನ್‌ಕಾರ್ಡ್ ಪಡೆದಿದ್ದು, ಸೆಪ್ಟಂಬರ್‌ನಲ್ಲಿ ಮುಂಬೈಗೆ ವಲಸೆ ಬಂದಿದ್ದರು.
ರೂ.2 ಲಕ್ಷ ಕೋಟಿ ಆದಾಯ ಘೋಷಣೆಯನ್ನು ಈ ಕುಟುಂಬದ ಹೆಸರಲ್ಲಿ ಮಾಡಲಾಗಿತ್ತು. ಆದರೆ, ಸರಕಾರ ಈ ಪ್ರತಿಪಾದನೆಯನ್ನು ತಿರಸ್ಕರಿಸಿ ಈ ಬಗ್ಗೆ ತನಿಖೆ ನಡೆಸಲಾಗುವುದೆಂದು ಹೇಳಿತ್ತು.
ದೇಶಾದ್ಯಂತದ ನಗರಗಳ ಜನರು, ತಮ್ಮ ಪಾನ್‌ಕಾರ್ಡ್‌ಗಳನ್ನು ಹಾಗೂ ಇತರ ವಿವರಗಳನ್ನು ಐಡಿಎಸ್ ಅನ್ವಯ ತಮ್ಮ ಹೆಸರಲ್ಲಿ ಆದಾಯ ಘೋಷಣೆ ಮಾಡಲು ಉಪಯೋಗಿಸಲಾಗಿದೆಯೆಂದು ಹೇಳಲು ಮುಂದೆ ಬರುತ್ತಿದ್ದಾರೆಂದು ಅಜ್ಞಾತವಾಗುಳಿಯ ಬಯಸಿರುವ ಹಿರಿಯ ಆದಾಯ ತೆರಿಗೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ಸೈಯದ್ ಕುಟುಂಬ ಮಾಡಿದೆಯೆನ್ನಲಾದ ಘೋಷಣೆಯ ಕುರಿತು ಪ್ರತಿಕ್ರಿಯಿಸಲು ಈ ಅಧಿಕಾರಿಗಳು ನಿರಾಕರಿಸಿದ್ದಾರಾದರೂ ಕುಟುಂಬದ ವಿವರವನ್ನು ಯಾರೋ ದುರುಪಯೋಗಪಡಿಸಿರುವ ಸಾಧ್ಯತೆಯನ್ನು ನಿಕಟವಾಗಿ ಪರಿಶೀಲಿಸುತ್ತಿದ್ದೇವೆಂದು ಇಲಾಖೆಯ ಇತರ ಮೂಲಗಳು ತಿಳಿಸಿವೆ.
ಘೋಷಣೆಯಲ್ಲಿ ನಮೂದಿಸಲಾಗಿರುವ ವಿಳಾಸದಲ್ಲಿ ಪತ್ತೆಯಾಗದ ಕುಟುಂಬವನ್ನು ಹುಡುಕಲು ಇಲಾಖೆ ಯಶಸ್ವಿಯಾಗಿದೆಯೇ ಎಂಬುದು ಮಂಗಳವಾರವೂ ಸ್ಪಷ್ಟವಾಗಿಲ್ಲ.