×
Ad

ಕಾಪು ತಾಲ್ಲೂಕು ರಚನೆಗೆ ಆಗ್ರಹಿಸಿ ಹೋರಾಟ ಸಮಿತಿ ಸಭೆ

Update: 2016-12-07 22:35 IST

ಪಡುಬಿದ್ರಿ, ಡಿ.7 : ಕಾಪು ತಾಲ್ಲೂಕು ರಚನೆ ಸಂಬಂಧ ಕಾಪು ವಿಧಾನಸಭಾ ಕ್ಷೇತ್ರದ 36 ಗ್ರಾಮ ಪಂಚಾಯತ್ ವ್ಯಾಪ್ತಿಯ ಹೋರಾಟ ಸಮಿತಿ ಸಭೆ ಕಾಪುವಿನಲ್ಲಿ ಬುಧವಾರ ನಡೆಯಿತು.

ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ಉಡುಪಿ ತಾಲ್ಲೂಕು ಕಚೇರಿ ವ್ಯಾಪ್ತಿಗೆ ಕಾಪು, ಉಡುಪಿ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಕೆಲ ಭಾಗಗಳು ಒಳಪಟ್ಟಿರುವುದರಿಂದ ಜನರಿಗೆ ಅನಾನುಕೂಲವಾಗುತ್ತಿದ್ದು, ಅದಕ್ಕಾಗಿ ಕಾಪು ತಾಲ್ಲೂಕು ರಚನೆಯಾಗಲೇಬೇಕಾಗಿದೆ.

ಕಾಪು ವಿಧಾನಸಭಾ ಕ್ಷೇತ್ರದ ಪೂರ್ವಭಾಗದ 10 ಗ್ರಾಮಗಳಿಗೆ ಅನುಕೂಲವಾಗುವಂತೆ ಹಿರಿಯಡ್ಕದಲ್ಲಿ ನಾಡ ಕಚೇರಿ ಆರಂಭಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕು ರಚನೆಯಾದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನಗಳೂ ತಾಲೂಕಿಗೆ ಲಭಿಸಲಿದ್ದು, ಇನ್ನಷ್ಟು ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಉಡುಪಿಯಲ್ಲಿರುವ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನೂ ಕಾಪುವಿಗೆ ಸ್ಥಳಾಂತರಿಸುವ ಬಗ್ಗೆ ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಲಾಗಿದೆ. ಸಚಿವರು ಸೂಕ್ತವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ನನ್ನ ವಿರೋಧವಿಲ್ಲ:

ಬ್ರಹ್ಮಾವರ ಪುರಸಭೆ ಮತ್ತು ತಾಲ್ಲೂಕು ರಚನೆಯಾಗದೆ ಇರುವುದಕ್ಕೆ ನಾವು ಕಾರಣರಲ್ಲ. ಈ ಬಗ್ಗೆ ನಮ್ಮ ವಿರುದ್ಧ ಆರೋಪ ಮಾಡುವುದು ಸಮಂಜಸವಲ್ಲ. ಐತಿಹಾಸಿಕ, ರಾಜಕೀಯ ಹಾಗೂ ಮಾನವ ಸಂಪನ್ಮೂಲತೆ ವಿಷಯದಲ್ಲಿ ನೋಡಿದರೆ ಕಾಪು ತಾಲ್ಲೂಕು ರಚನೆಗೆ ಅರ್ಹವಾಗಿದೆ ಎಂದು ಸೊರಕೆ ಹೇಳಿದರು.

ಜನಾಭಿಪ್ರಾಯ ಅಗತ್ಯ:

ಕಾಪು ತಾಲ್ಲೂಕು ರಚನೆಯಾದರೆ ಕ್ಷೇತ್ರದ ಪೂರ್ವ ಭಾಗದ ಗ್ರಾಮಗಳ ಜನರು 40 ಕಿಮೀ ಸಂಚರಿಸಿ ಕಾಪುವಿಗೆ ಬರಬೇಕಾದ ಪರಿಸ್ಥಿತಿ ಇದೆ. ತಾಲೂಕು ರಚನೆಗೆ ವಿರೋಧವಿಲ್ಲ. ಆ ಭಾಗದ ಗ್ರಾಮಗಳಲ್ಲಿಯೂ ಸಭೆ ನಡೆಸಿ ಜನಾಭಿಪ್ರಾಯ ಪಡೆಯುವುದು ಉತ್ತಮ ಎಂದು ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ಅಭಿಪ್ರಾಯಪಟ್ಟರು.

ತಾಲೂಕು ರಚನೆಗೆ ಸರಕಾರದ ಕಣ್ಣು ತೆರೆಸಲು ಹೋರಾಟ ಅಗತ್ಯ. ಜನಹಿತ ಹಾಗೂ ಅಧಿಕಾರ ವಿಕೇಂದ್ರಿಕರಣದ ದೃಷ್ಟಿಯಿಂದ ತಾಲೂಕು ರಚನೆಯಾಗಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಶೆಟ್ಟಿ ಹೇಳಿದರು.

ಕಾಪು ಪುರಸಭಾಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷ ಕೆ.ಎಚ್.ಉಸ್ಮಾನ್, ಜಿ.ಪಂ. ಸದಸ್ಯ ವಿಲ್ಸನ್ ರಾಡ್ರಿಗಸ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಲೀಲಾಧರ ಶೆಟ್ಟಿ, ಗ್ರಾ.ಪಂ ಒಕ್ಕೂಟದ ಉಡುಪಿ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ವಾಸುದೇವ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಕಾಪು ಬ್ಲಾಕ್ ದಕ್ಷಿಣದ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News