ಭಾರತೀಯ ಕ್ರಿಕೆಟಿಗರಿಗೆ ಸೂಟ್ ಇಲ್ಲವಂತೆ. ಒಂದು ಹೊಸ ಸೂಟ್‌ಗೆ ಎಷ್ಟು ಲಕ್ಷ ಗೊತ್ತೇ?
ಮುಂಬೈ, ಡಿ.8: ಭಾರತ ಕ್ರಿಕೆಟ್‌ನ 'ಮೆನ್ ಇನ್ ಬ್ಲೂ’ ತಂಡ ಸದಸ್ಯರಿಗೆ ತಲಾ 2.5 ಲಕ್ಷ ರೂಪಾಯಿ ಬೆಲೆಯ ಇಟೆಲಿಯಲ್ಲಿ ಸಿದ್ಧಪಡಿಸಲಾದ ಸೂಟ್‌ಗಳನ್ನು ನೀಡಬೇಕು ಎಂಬ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೊಹಾರಿ ಸಲಹೆಯನ್ನು ಮಂಡಳಿಯು ತಿರಸ್ಕರಿಸಿದೆ.
ಬಿಸಿಸಿಐ ವೆಚ್ಚದ ಮೇಲೆ ಕೋರ್ಟ್ ಕೆಂಗಣ್ಣು ಬೀರಿರುವ ಹಿನ್ನೆಲೆಯಲ್ಲಿ ಮತ್ತು ಅಂತಾರಾಷ್ಟ್ರೀಯ ಬ್ರಾಂಡ್‌ನ ಸೂಟ್‌ಗಳಿಗೆ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಇದನ್ನು ನಿರಾಕರಿಸಲಾಗಿದೆ.
ಕ್ರಿಕೆಟ್ ಆಟಗಾರರು ಹಾಗೂ ಬಿಸಿಸಿಐನ ಅತ್ಯುನ್ನತ ಅಧಿಕಾರಿಗಳಿಗೆ ತಲಾ 2.5 ಲಕ್ಷ ರೂಪಾಯಿ ವೆಚ್ಚದಲ್ಲಿ 50 ಹೊಸ ಸೂಟ್‌ಗಳನ್ನು ಖರೀದಿಸುವ ಪ್ರಸ್ತಾವನೆಯನ್ನು ಸಿಇಓ ಮುಂದಿಟ್ಟಿದ್ದರು. ಈ ಸಂಬಂಧ ನವೆಂಬರ್ 19ರಂದು ಅಧ್ಯಕ್ಷ ಅನುರಾಗ್ ಠಾಕೂರ್, ಕಾರ್ಯದರ್ಶಿ ಅಜಯ್ ಶಿರ್ಕೆ ಅವರಿಗೆ ಮನವಿ ಸಲ್ಲಿಸಿದ್ದರು.
ಸುಪ್ರೀಂಕೋರ್ಟ್‌ನ ಸೂಚನೆಯಂತೆ, ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಮಂಡಳಿಗಳು, ಲೋಧಾ ಸಮಿತಿ ಶಿಫಾರಸು ಒಪ್ಪಿಕೊಳ್ಳುವವರೆಗೆ ಯಾವುದೇ ನಿರ್ಧಾರವನ್ನೂ ಕೈಗೊಳ್ಳುವಂತಿಲ್ಲ. ಬಿಸಿಸಿಐ ಕಾರ್ಯದರ್ಶಿ ಶಿರ್ಕೆ ಅವರು, ಮಂಡಳಿಯ ವಕೀಲ ಅಭಿನವ್ ಮುಖರ್ಜಿ ಅವರಿಂದ ಈ ಬಗ್ಗೆ ಅಭಿಪ್ರಾಯ ಪಡೆದಿದ್ದು, ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ, ಯಾವುದೇ ಹೊಸ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾಗಿ ತಿಳಿದುಬಂದಿದೆ.