ನೋಟು ರದ್ದತಿಯಿಂದ ಆರ್ಥಿಕತೆ ಹಳಿ ತಪ್ಪಿದೆ ಎಂದ ಎಚ್ ಡಿಎಫ್ ಸಿ ಅಧ್ಯಕ್ಷ
ಹೊಸದಿಲ್ಲಿ, ಡಿ.8: ಕಾಳಧನವನ್ನು ನಿಯಂತ್ರಿಸುವ ಹಾಗೂ ಕ್ಯಾಶ್ ಲೆಸ್ ಆರ್ಥಿಕತೆಯನ್ನು ಉತ್ತೇಜಿಸುವ ಉದ್ದೇಶದಿಂದ ಸರಕಾರ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿ ದೇಶದ ಆರ್ಥಿಕತೆಯ ಹಳಿ ತಪ್ಪುವಂತೆ ಮಾಡಿದೆ ಎಂದು ಎಚ್ ಡಿಎಫ್ ಸಿ ಅಧ್ಯಕ್ಷ ದೀಪಕ್ ಪಾರೆಖ್ ಹೇಳಿದ್ದಾರೆ.
‘‘ನೋಟು ರದ್ದತಿಯು ಅಲ್ಪಾವಧಿಯಲ್ಲಿ ಆರ್ಥಿಕತೆಯ ಹಳಿ ತಪ್ಪಿಸಿದೆ.ಇದನ್ನು ಮುಂದಿನ ಬಜೆಟ್ ನಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ನಾನು ನಿರೀಕ್ಷಿಸುತ್ತೇನೆ,’’ ಎಂದು ಪಾರೆಖ್ ಆಶಾವಾದ ವ್ಯಕ್ತಪಡಿಸಿದ್ದಾರೆ.
‘‘ಫ್ಯಾಕ್ಟರಿಗಳು ತಮ್ಮ ಶೇ.100ರಷ್ಟು ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಂಡು ಕಾರ್ಯನಿರ್ವಹಿಸಿದಾಗ ಉದ್ಯಮ ಕ್ಷೇತ್ರದ ಆತ್ಮವಿಶ್ವಾಸ ವೃದ್ಧಿಯಾಗುವುದು. ಆದರೆ ಯಾವುದೇ ಫ್ಯಾಕ್ಟರಿ ತನ್ನ ಪೂರ್ಣ ಸಾಮರ್ಥ್ಯ ಉಪಯೋಗಿಸಿ ಕಾರ್ಯಾಚರಿಸುತ್ತಿಲ್ಲ,’’ ಎಂದವರು ಹೇಳಿದರು.
ಈ ಹಿಂದೆ ನವೆಂಬರ್ 17 ರಂದು ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ನೋಟು ರದ್ದತಿ ನಿರ್ಧಾರವನ್ನು ಬಾಯಿ ತುಂಬಾ ಹೊಗಳಿದ್ದ ಪಾರೆಖ್ ಇದು ಯಾವುದೇ ಸರಕಾರ ಕೈಗೊಂಡ ಅತ್ಯಂತ ದೊಡ್ಡ ಸುಧಾರಣಾವಾದಿ ಕ್ರಮ ಎಂದು ಕೊಂಡಾಡಿದ್ದರು.