ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ತಾಪಂ ಸದಸ್ಯರು

Update: 2016-12-08 14:03 GMT

ಬಂಟ್ವಾಳ, ಡಿ.8 :  ಜನಸಾಮಾನ್ಯರಿಗೆ ಕಾನೂನಿನ ಇತಿಮಿತಿಯೊಳಗೆ ಏನಾದರೂ ಪ್ರಯೋಜನ ಮಾಡುವುದಾದರೆ ಮಾತ್ರ ಇಲ್ಲಿರಿ. ಅನಾವಶ್ಯಕ ತೊಂದರೆ ಮಾಡುವ ಅಧಿಕಾರಿಗಳಿಗೆ ಇಲ್ಲಿ ಜಾಗ ಇಲ್ಲ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.

ಗುರುವಾರ ಬಿ.ಸಿ.ರೋಡಿನ ಎಸ್.ಜಿ.ಎಸ್.ಆರ್.ವೈ. ಸಭಾಂಗಣದಲ್ಲಿ ನಡೆದ ಬಂಟ್ವಾಳ ತಾಪಂ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗನವಾಡಿ ಕೇಂದ್ರವೊಂದರ ವಿದ್ಯುತ್ತನ್ನು ಕಡಿತಗೊಳಿಸಿರುವುದಕ್ಕೆ ಅಸಮಾಧಾನಗೊಂಡ ಅವರು, ಅಧಿಕಾರಿಗಳಿಗೆ ಈ ಮೇಲಿನಂತೆ ತಾಕೀತು ಮಾಡಿದರು.

ವಿಟ್ಲ ಮೆಸ್ಕಾಂ ವ್ಯಾಪ್ತಿಗೆ ಒಳಪಡುವ ಅಂಗವಾಡಿ ಕೇಂದ್ರದ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಸಂಪರ್ಕ ಕಡಿತಗೊಳಿಸಲಾದ ಕ್ರಮಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಸಿಡಿಪಿಒ ಸುಧಾ ಜೋಷಿ ಮೆಸ್ಕಾಂ ಯಾವುದೇ ಮಾಹಿತಿ ನೀಡದೆ ಕಡಿತಗೊಳಿಸಿದೆ ಎಂದರು.

ಆಗ ಮಧ್ಯಪ್ರವೇಶಿಸಿದ ಅಧ್ಯಕ್ಷರು, ಮಾನವೀಯ ನೆಲೆಯಲ್ಲಾದರೂ ಅದರ ಸಂಪರ್ಕ ಕಡಿತಗೊಳಿಸಬಾರದಿತ್ತು. ಕನಿಷ್ಠ ನಮ್ಮ ಗಮನಕ್ಕಾದರೂ ತಂದರೆ ಪರಿಹರಿಸಬಹುದಿತ್ತು. ಉದ್ದೇಶಪೂರ್ವಕವಾಗಿ ಜನರಿಗೆ ಯಾವುದೇ ತೊಂದರೆ ಕೊಡುವ ಕೆಲಸ ಮಾಡದಿರಿ ಎಂದು ಸೂಚಿಸಿದರು.

ಮೆಸ್ಕಾಂ ವಿರುದ್ಧ ಉಪಾಧ್ಯಕ್ಷ ಗರಂ

ಇದೇ ವೇಳೆ ಬಂಟ್ವಾಳ ನಗರ ವ್ಯಾಪ್ತಿಗೆ ಕತ್ತಲ ಭಾಗ್ಯ ಒದಗಿಸಿರುವ ಮತ್ತು ಸಮಸ್ಯೆ ಹೇಳಿಕೊಳ್ಳಲು ಕರೆ ಮಾಡಿದರೂ ಸ್ವೀಕರಿಸದ ಮೆಸ್ಕಾಂ ಇಂಜಿನಿಯರ್ ವಿರುದ್ಧ ಉಪಾಧ್ಯಕ್ಷ ಅಬ್ಬಾಸ್ ಆಲಿ ತರಾಟೆಗೆ ತೆಗೆದುಕೊಂಡರು. ಸದಸ್ಯರೂ ಇದಕ್ಕೆ ದನಿಗೂಡಿಸಿದರು. ಕರೆ ಸ್ವೀಕರಿಸದ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಲೈನ್ ಮ್ಯಾನ್ ಗಳಿಗಿರುವಷ್ಟು ಸೌಜನ್ಯ ಜೆಇ, ಎಇಯವರಿಗಿಲ್ಲ ಎಂದು ಸದಸ್ಯರು ದೂರಿದರು. ಮುಂದಿನ ದಿನಗಳಲ್ಲಿ ಇಂಥ ದೂರು ಬರದಂತೆ ಎಚ್ಚರಿಕೆ ವಹಿಸುವಂತೆ ಉಪಾಧ್ಯಕ್ಷ ಅಬ್ಬಾಸ್ ಆಲಿ ಸೂಚಿಸಿದರು.

ಧರಣಿ ಎಚ್ಚರಿಕೆ

ತಾಪಂ ಸಾಮಾನ್ಯ ಸಭೆಗೆ ಹದಿನೈದು ದಿನ ಮೊದಲೇ ದಿನ ನಿಗದಿಯಾಗುತ್ತದೆ. ಆದರೆ ತಾಲೂಕು ಮಟ್ಟದ ಅಧಿಕಾರಿಗಳು ಇದಕ್ಕೆ ಹೊಂದಿಕೊಳ್ಳದೆ ಸಭೆಗೆ ಗೈರುಹಾಜರಾಗುವ ಮೂಲಕ ಲಘುವಾಗಿ ಪರಿಗಣಿಸುತ್ತಿದ್ದಾರೆ ಎಂದು ಸದಸ್ಯರಾದ ಉಸ್ಮಾನ್ ಕರೋಪಾಡಿ, ಸಂಜೀವ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು.

ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳ ಉಪಸ್ಥಿತಿ ಅಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ತಾಲೂಕು ಮುಖ್ಯಸ್ಥರು ಗೈರುಹಾಜರಾದರೆ, ಧರಣಿ ನಡೆಸುವುದಾಗಿ ಸದಸ್ಯರು ಎಚ್ಚರಿಕೆ ನೀಡಿದರು.

ಶಿಕ್ಷಕಿ ವರ್ಗಾವಣೆ

ಬಾಳ್ತಿಲ ಗ್ರಾಮದ ನೀರಪಾದೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ಮೊಸರು, ಚಿತ್ರಾನ್ನ, ತರಕಾರಿ ಸಾಂಬಾರ್ ನೀಡುತ್ತಿಲ್ಲ ಎಂದು ಮಕ್ಕಳ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿದ್ಯಾರ್ಥಿನಿಯೋರ್ವಳಿಗೆ ಶಾಲಾ ಮುಖ್ಯ ಶಿಕ್ಷಕಿ ಬೈದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಅಸ್ವಸ್ಥಗೊಂಡು ಕುಸಿದು ಬಿದ್ದ ಪ್ರಕರಣಕ್ಕೆ ಸಂಬಂಧಿಸಿ, ಶಿಕ್ಷಕಿಯನ್ನು ಈ ಶಾಲೆಯಿಂದ ವರ್ಗಾಯಿಸಲಾಗಿದೆ ಎಂದು ಉಪಾಧ್ಯಕ್ಷ ಅಬ್ಬಾಸ್ ಆಲಿ ಪ್ರಶ್ನೆಗೆ ಶಿಕ್ಷಣಾಧಿಕಾರಿ ಲೋಕೇಶ್ ಉತ್ತರಿಸಿದರು.

ಆದರೆ ಶಿಕ್ಷಕಿ ಇನ್ನೂ ಶಾಲೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಪಂ ಸದಸ್ಯೆ ಕಮಲಾಕ್ಷಿ ಪೂಜಾರಿ ಸಹಿತ ಸದಸ್ಯರು ಸಭೆ ಗಮನ ಸೆಳೆದರು.

ಇದಕ್ಕ ಪ್ರತಿಕ್ರಿಯಿಸಿದ ಶಿಕ್ಷಣಾಧಿಕಾರಿ, ಈಗಾಗಲೇ ವರ್ಗಾವಣಾ ಆದೇಶ ಮಾಡಲಾಗಿದ್ದು, ಪ್ರಸ್ತುತ ಶಾಲಾ ಮುಖ್ಯ ಶಿಕ್ಷಕಿ ರಜೆಯಲ್ಲಿ ತೆರಳಿರುವುದರಿಂದ ಶುಕ್ರವಾರ ತೆರವು ಆದೇಶ ಹೊರಬೀಳಲಿದೆ ಎಂದರು.

ಕುಡಿಯುವ ನೀರಿಗೆ ವಿಶೇಷ ಸಭೆ

ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ನೀರಿನ ಮೂಲ ಹುಡುಕುವುದು, ಅಂತರ್ಜಲ ವೃದ್ಧಿಪಡಿಸಲು ಕಿಂಡಿ ಅಣೆಕಟ್ಟು ದುರಸ್ತಿ ಹಾಗೂ ನೀರಿನ ಶೇಖರಣೆಯ ಕುರಿತು ಅಧಿಕಾರಿಗಳ ವಿಶೇಷ ಸಭೆಯನ್ನು ಮುಂದಿನ ಮಂಗಳವಾರ ಕರೆಯಲಾಗಿದೆ ಎಂದು ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂಡ ಸದಸ್ಯರ ಪ್ರಶ್ನೆಗೆ ಉತ್ತರಿಸಿದರು.

ಇದೇ ವೇಳೆ ತಾಲೂಕಿಗೆ ಇಂಜಿನಿಯರುಗಳ ಕೊರತೆ ಇದ್ದು, ಕನಿಷ್ಠ ಇನ್ನೂ ಎಂಟು ಮಂದಿ ಇಂಜಿನಿಯರುಗಳ ನೇಮಕಾತಿಗೆ ನಿರ್ಣಯ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನರೇಂದ್ರಬಾಬು ಮನವಿ ಮಾಡಿದರು.

ರೇಷನ್ ಕಾರ್ಡ್ ನಿಂದ ಹಿಂಸೆ

ಆಧಾರ್ ಲಿಂಕ್ ಮಾಡದ ಹಿನ್ನೆಲೆಯಲ್ಲಿ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಗೊಳಿಸಿರುವುದರಿಂದ ಫಲಾನುಭವಿಗಳು ತೊಂದರೆ ಅನುಭವಿಸುವಂತಾಗಿದೆ. ಜೊತೆಗೆ ಆಧಾರ್ ಲಿಂಕ್ ಗೆ ಪಂಚಾಯತ್, ತಾಲೂಕು ಕಚೇರಿ, ಆಹಾರ ಇಲಾಖೆಗಳಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಒಟ್ಟಾರೆಯಾಗಿ ರೇಷನ್ ಸಮಸ್ಯೆ ಜನರಿಗೆ ಹಿಂಸೆಯಾಗಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಇಲಾಖೆ ಅಧಿಕಾರಿ, ಪಡಿತರ ರದ್ದಾಗಿಲ್ಲ, ಅಮಾನತಿನಲ್ಲಿಡಲಾಗಿದೆ ಎಂದು ಸ್ಪಷ್ಟಪಡಿಸಿದರು. ತಾಲೂಕಿನಲ್ಲಿ 45 ಸಾವಿರ ಮಂದಿ ವಿವಿಧ ಕಾರಣಗಳಿಂದಾಗಿ ಆಧಾರ್ ಲಿಂಕ್ ಮಾಡಿಸಿಲ್ಲ. ಡಿಸೆಂಬರ್ 10 ಕೊನೇ ದಿನವಾಗಿದ್ದು, ಇದೀಗ ಲಿಂಕ್ ಪ್ರಕ್ರಿಯ ನಡೆಯುತ್ತಿದೆ ಎಂದರು.

ಸಹಕಾರಿ ಸಂಘ ಮುಚ್ಚುವ ಸ್ಥಿತಿಯಲ್ಲಿ

500, 1000 ನೋಟು ರದ್ದು ಹಿನ್ನೆಲೆಯಲ್ಲಿ ಸಹಕಾರಿ ಸಂಘಗಳು ಮುಚ್ಚುವ ಸ್ಥಿತಿಯಲ್ಲಿದೆ ಎಂದು ಸದಸ್ಯ ಸಂಜೀವ ಪೂಜಾರಿ ಸಭೆ ಗಮನ ಸೆಳೆದರು. ಹಿಂದಿನ ರೀತಿಯಲ್ಲಿ ಸಹಕಾರಿ ಸಂಘ ಮುಂದುವರಿಯುವ ಕ್ರಮ ಕೈಗೊಳ್ಳಲು ನಿರ್ಣಯ ದಾಖಲಿಸುವಂತೆ ಒತ್ತಾಯಿಸಿದರು. ಈ ಸಂಬಂಧ ನಮಗೆ ಯಾವುದೇ ಸುತ್ತೋಲೆ ಬರಲಿಲ್ಲ ಎಂದು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಶೌಚಾಲಯವಿಲ್ಲ

ಸಂಪೂರ್ಣ ಬಯಲುಶೌಚ ಮುಕ್ತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರೋಪಾಡಿ ಗ್ರಾಪಂ ವ್ಯಾಪ್ತಿಯ ನಾಲ್ಕು ಎಸ್.ಸಿ. ಕುಟುಂಬದ ಮನೆಗಳಿಗೆ ಇನ್ನೂ ಶೌಚಾಲಯ ವ್ಯವಸ್ಥೆ ಆಗಿಲ್ಲ ಎಂದು ಸದಸ್ಯ ಉಸ್ಮಾನ್ ಕರೋಪಾಡಿ ಗಮನ ಸೆಳೆದರು.

 ಶೌಚಾಲಯ ಇಲ್ಲದಿದ್ದರೂ ಬಯಲುಮುಕ್ತ ಶೌಚಾಲಯದ ಗ್ರಾಮ ಎಂಬ ಪ್ರಶಸ್ತಿ ಕರೋಪಾಡಿಗೆ ಬಂದಿದೆ. ಅದನ್ನು ಹೇಗೆ ಕೊಡಲಾಯಿತು ಎಂದು ಉಸ್ಮಾನ್ ಅಚ್ಚರಿ ವ್ಯಕ್ತಪಡಿಸಿದರು.

ಇದಕ್ಕೆ ಕಾರ್ಯನಿರ್ವಹಣಾಧಿಕಾರಿ ತಾಂತ್ರಿಕ ಸಮಸ್ಯೆಯ ಸಮಜಾಯಿಸಿಕೆ ನೀಡಿದರು.

ಯಾವುದೇ ಸಮಸ್ಯೆ ಅಧಿಕಾರಿಗಳ ಉತ್ತರದಿಂದ ಪರಿಹಾರವಾಗುವುದಿಲ್ಲ. ಅಧಿಕಾರಿಗಳು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದರೆ ಮಾತ್ರ ಸಮಸ್ಯೆಗೆ ಪರಿಹಾರ. ಈ ದಿಸೆಯಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ ಉಪಸ್ಥಿತರಿದ್ದರು.

ಜಿಪಂ ಸದಸ್ಯ ರವೀಂದ್ರ ಕಂಬಳಿ, ಸದಸ್ಯರಾದ ರಮೇಶ್ ಕುಡ್ಮೇರು, ಆದಂ ಕುಂಞ ಕೆದಿಲ, ಹೈದರ್, ಮಲ್ಲಿಕಾ ಶೆಟ್ಟಿ, ಮಂಜುಳಾ ಕುಶಲ, ನವೀನ್, ಯಶವಂತ ಪೊಳಲಿ, ಪಿಲಾತಬೆಟ್ಟು ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News