×
Ad

ರೈತ ಸಂಘದ ನೇತೃತ್ವದಲ್ಲಿ ನಿವೇಶನ ರಹಿತರಿಂದ ಪ್ರತಿಭಟನೆ

Update: 2016-12-08 19:39 IST

 ವಿಟ್ಲ , ಡಿ.8 :  ಬಂಟ್ವಾಳ ತಾಲೂಕಿನ ನಾವೂರು ಗ್ರಾಮ ಪಂಚಾಯತ್‌ನಲ್ಲಿ ನಿವೇಶನ ರಹಿತ ರೈತರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಪಂಚಾಯತ್‌ನಲ್ಲಿ ಅರ್ಜಿ ದಾಖಲೆಗಳು ಕಾಣೆಯಾಗಿರುವ ಬಗ್ಗೆ ಹಾಗೂ ಅರ್ಜಿ ಸ್ವೀಕರಿಸಲು ಪಂಚಾಯತ್ ಅಧಿಕಾರಿಗಳು ನಿರಾಕರಿಸುತ್ತಿರುವ ಬೆಳವಣಿಗೆ ವಿರುದ್ದ ಕರ್ನಾಟಕ ಪ್ರಾಂತ ರೈತ ಸಂಘ ಬಂಟ್ವಾಳ ತಾಲೂಕು ಸಮಿತಿ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ನಿವೇಶನ ರಹಿತ ರೈತರು ತಮ್ಮ ಹಕ್ಕುಗಳಿಗಾಗಿ ನಿರಂತರ ಹೋರಾಟವನ್ನು ನಡೆಸಬೇಕಾಗಿದೆ. ತಮ್ಮ ಹಕ್ಕುಗಳನ್ನು ಕಸಿದು ತಿನ್ನುವ ಆಡಳಿತರೂಢ ವ್ಯವಸ್ಥೆಯ ಬಗ್ಗೆ ಭೂ ಹೋರಾಟ ಅನಿವಾರ್ಯ ಎಂದರು.

ರೈತ ಸಂಘದ ತಾಲೂಕು ಕಾರ್ಯದರ್ಶಿ ಬಿ ನಾರಾಯಣ, ಸಿಐಟಿಯು ತಾಲೂಕು ಮುಖಂಡರಾದ ಬಿ ಸಂಜೀವ ಬಂಗೇರ, ಲೋಲಾಕ್ಷಿ, ಜನಾರ್ದನ ಕುಲಾಲ್, ಲಕ್ಷ್ಮಿ ನಾವೂರು ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬಳಿಕ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಅಭಿವೃದ್ದಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಅಧ್ಯಕ್ಷರು ನಿವೇಶನ ರಹಿತರ ಅರ್ಜಿ ಸ್ವೀಕರಿಸಿ ಸರಕಾರಿ ಜಮೀನಿನ ಗಡಿ ಗುರುತು ಮಾಡಿ ನಿವೇಶನ ರಹಿತರಿಗೆ ಹಂಚಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News