×
Ad

45 ದಿನಗಳಲ್ಲಿ ಮಲ್ಪೆ-ಪಡುಕೆರೆ ಸೇತುವೆ ಕಾಮಗಾರಿ ಪೂರ್ಣ: ಪ್ರಮೋದ್ ಮಧ್ವರಾಜ್

Update: 2016-12-08 20:47 IST

ಉಡುಪಿ, ಡಿ.8: ಮಲ್ಪೆಪಡುಕರೆ ಭಾಗದ ಜನತೆಯ ಬಹುಕಾಲದ ಬೇಡಿಕೆ ಯಾಗಿರುವ ಪಡುಕೆರೆ- ಮಲ್ಪೆ ಸಂಪರ್ಕ ಸೇತುವೆ ಕಾಮಗಾರಿಯು ಭರ ದಿಂದ ಸಾಗುತ್ತಿದ್ದು, ಮುಂದಿನ 45 ದಿನಗಳಲ್ಲಿ ಸೇತುವೆ ಕಾಮಗಾರಿ ಪೂರ್ಣ ಗೊಳ್ಳಲಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಮಲ್ಪೆ-ಪಡುಕೆರೆ ಸೇತುವೆ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿ ಅವರು ಮಾತನಾಡುತಿದ್ದರು. ಹಿಂದಿನ ಸರಕಾರ 13.5ಕೋಟಿ. ರೂ. ವೆಚ್ಚದ ಯೋಜನೆ ತಯಾರಿಸಿ ಈ ಸೇತುವೆಗೆ ಮಂಜೂರಾತಿಯನ್ನು ನೀಡಿದ್ದು, ನಂತರ ಬಂದ ನಮ್ಮ ಸರಕಾರ ಈ ಸೇತುವೆಯ ಡಿಸೈನ್ ಬದಲಾಯಿಸಿತು. ಇದರ ಎತ್ತರವನ್ನು ಇನ್ನಷ್ಟು ಹೆಚ್ಚಿಸಿ ಅಡಿಯಲ್ಲಿ ಬೋಟುಗಳು ಸಾಗುವಂತೆ ಯೋಜನೆ ತಯಾರಿಸಲಾಯಿತು. 2013ರ ಅಕ್ಟೋಬರ್‌ನಲ್ಲಿ ಪ್ರಥಮ ಕಂತಿನ ಹಣವನ್ನು ಬಿಡುಗಡೆ ಮಾಡಲಾಯಿತು. ಸೇತುವೆಯ ಅಗಲವನ್ನು 4.2ಮೀ.ನಿಂದ 5.5.ಮೀಟರ್‌ಗೆ ವಿಸ್ತರಿಸಲಾಗಿದೆ. ಹೀಗಾಗಿ ಸೇತುವೆಯ ಒಟ್ಟು ವೆಚ್ಚ 16.91 ಕೋಟಿ ರೂ.ಗೆ ಹೆಚ್ಚಿಸಲಾಯಿತು ಎಂದರು.

 ಮಲ್ಪೆ ಅಯ್ಯಪ್ಪ ಮಂದಿರದಿಂದ ಈ ಸೇತುವೆ ಸಂಪರ್ಕಿಸುವ ರಸ್ತೆಯನ್ನು 50ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಶಾಂತಿನಗರ- ಪಡುಕೆರೆ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯ 50ಲಕ್ಷ ರೂ. ಅನುದಾನದಲ್ಲಿ ಮಾಡಲಾಗುವುದು. ಸೇತುವೆಯ ಒಟ್ಟು 16.91ಕೋಟಿ ರೂ. ಅನುದಾನ ದಲ್ಲಿ 8 ಕೋಟಿ ನಗರೋತ್ಥಾನ ಯೋಜನೆಯಡಿ, 5.5 ಕೋಟಿ ಉಡುಪಿ ನಗರಸಭೆಯ ಅಮೃತ ಮಹೋತ್ಸವ ನಿಧಿಯಿಂದ, 2 ಕೋಟಿ ನಗರಸಭೆಯ ಸ್ವಂತ ನಿಧಿ, 50 ಲಕ್ಷ ರೂ. ವಿಶೇಷ ಅನುದಾನ ಮತ್ತು 90 ಲಕ್ಷ ರೂ. ಅಮೃತ ಮಹೋತ್ಸವದ ಬಡ್ಡಿಯಿಂದ ಒದಗಿಸಲಾಗಿದೆ ಎಂದು ಅವರು ಹೇಳಿದರು.

ಈಗಾಗಲೇ ಶೇ.95ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಶೇ.5ರಷ್ಟು ಕಾಮಗಾರಿ ಬಾಕಿ ಇದೆ. ಕಾಮಗಾರಿ ಪೂರ್ಣಗೊಂಡ ಕೂಡಲೇ ಸೇತುವೆ ಯನ್ನು ಉದ್ಘಾಟಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಮೀನುಗಾರಿಕೆ ಇಲಾಖೆಯಿಂದ ನಬಾರ್ಡ್ ಯೋಜನೆಯಡಿ ಪಡುಕೆರೆಯಲ್ಲಿ ಜೆಟ್ಟಿ ನಿರ್ಮಿಸಲು 10 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ. ಒಟ್ಟು ಈ ಪ್ರದೇಶದ ಅಭಿವೃದ್ದಿಗೆ 28 ಕೋಟಿ ರೂ.ಗಳನ್ನು ವ್ಯಯ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಮಲ್ಪೆಬಂದರಿನ ಮೂರನೆ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಈವರೆಗೆ ಬಾಕಿ ಇದ್ದ ಸ್ಲಿಪ್ ವೇ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಈ ಸ್ಲಿಪ್‌ವೇಯಲ್ಲಿ ಒಂದು ಬಾರಿ 13 ಬೋಟ್‌ಗಳನ್ನು ನಿಲ್ಲಿಸಬಹುದು. ಈ ಸಂಖ್ಯೆಯನ್ನು ಹೆಚ್ಚು ಮಾಡುವಂತೆ ಹಾಗೂ ಮೂರನೆ ಹಂತದ ಕಾಮಗಾರಿಯಲ್ಲಿ ಇನ್ನೂ ನಡೆಯಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮೀನುಗಾರರ ಸಂಘ ಮತ್ತು ಅಧಿಕಾರಿಗಳ ಸಭೆ ನಡೆಸಿ ವರದಿ ನೀಡಲಾಗು ವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ನಗರಸಭಾ ಸದಸ್ಯರಾದ ನಾರಾಯಣ ಕುಂದರ್, ರಮೇಶ್ ಕಾಂಚನ್, ಚಂದ್ರಕಾಂತ್, ಗಣೇಶ್ ನೆರ್ಗಿ, ಬಂದರು ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳಾದ ನಾಗರಾಜ್, ಗಣಪತಿ ಭಟ್, ಮೀನುಗಾರ ಮುಖಂಡ ಟಿ.ಹಿರಿಯಣ್ಣ ಕಿದಿಯೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News