ಬಪ್ಪನಾಡಿನಲ್ಲಿ ಸರಣಿ ಅಪಘಾತ
ಮುಲ್ಕಿ, ಡಿ.8: ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಬಳಿ ಕಾರು, ಬಸ್ ಮತ್ತು ಟ್ಯಾಂಕರ್ ನಡುವೆ ಸರಣಿ ಅಪಘಾತ ನಡೆದಿದ್ದು , ಘಟನೆಯಲ್ಲಿ ಕಾರು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶ ಪಾರಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಮಂಗಳೂರಿನಿಂದ ಉಡುಪಿಗೆ ಹೋಗುತ್ತಿದ್ದ ತಡೆರಹಿತ ಬಸ್ಸೊಂದು ಪ್ರಯಾಣಿಕರನ್ನು ಹತ್ತಿಸಲು ಬಪ್ಪನಾಡು ದೇವಸ್ಥಾನದ ಎದುರು ಏಕಾಏಕಿ ನಿಲ್ಲಿಸಿದಾಗ ಹಿಂದಿನಿಂದ ಬರುತ್ತಿದ್ದ ಸಾಂಟ್ರೋ ಕಾರಿನ ಚಾಲಕ ಬಸ್‌ನ ಹಿಂಭಾಗದಲ್ಲಿ ನಿಲ್ಲಿಸಿದ್ದ. ಕಾರಿನ ಹಿಂದಿನಿಂದ ಅತಿ ವೇಗದಿಂದ ಬಂದ ಟ್ಯಾಂಕರ್ ಚಾಲಕ ಕಾರಿಗೆ ಢಿಕ್ಕಿ ಹೊಡೆದಿದ್ದಾನೆ. ಢಿಕ್ಕಿ ಹೊಡೆದ ರಭಸಕ್ಕೆ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕ ದಾಟಿ ಮುತ್ತೊಂದು ಭಾಗದಲ್ಲಿ ನಿಂತಿದೆ.
ಇತ್ತ ಟ್ಯಾಂಕರ್ ಢಿಕ್ಕಿ ಹೊಡೆದು ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನಲ್ಲಿದ್ದ ತಡೆರಹಿತ ಬಸ್ಸಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಚಾಲಕ ಅದರೊಳಗೆ ಸಿಕ್ಕಿ ಹಾಕಿ ಒದ್ದಾಡುತ್ತಿದ್ದಾಗ ಸ್ಥಳೀಯರು ಆತನನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರು ಚಾಲಕ ಕುಂದಾಪುರ ಶಂಕರನಾರಾಯಣ ನಿವಾಸಿ ಸದಾಶಿವ(56) ಅಲ್ಪಸ್ವಲ್ಪಗಾಯಗಳೊಂದಿಗೆ ಪವಾಢಸದೃಶ ಪಾರಾಗಿದ್ದಾರೆ.