ಬೆಳ್ತಂಗಡಿ : ವಾಣಿ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ

Update: 2016-12-08 17:46 GMT

ಬೆಳ್ತಂಗಡಿ , ಡಿ.8 : ಪಂಚೇಂದ್ರಿಯಗಳಿಗೆ ಉತ್ತಮ ವಿಷಯಗಳನ್ನು ಕೊಡುವುದು ಮತ್ತು ಶುದ್ಧವಾಗಿರಿಸುವುದು, ಉತ್ತಮ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಸಂಸ್ಕೃತಿ. ಇದನ್ನೆ ವಿದ್ಯಾರ್ಥಿಗಳ ಬಾಲ್ಯ ಶಿಕ್ಷಣ ಪ್ರಾರಂಭದಲ್ಲಿ ಮನೆ ಮತ್ತು ಶಾಲೆಗಳಲ್ಲಿ ದೊರೆತಾಗ ವಿದ್ಯಾರ್ಥಿಗಳು ಉತ್ತಮ ಸಾಧಕರಾಗಲು ಸಾಧ್ಯ ಎಂದು ಬಂಟ್ವಾಳ ಪ್ರಥಮ ಧರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ಗಿರೀಶ್ ಭಟ್ ಎ. ಹೇಳಿದ್ದಾರೆ.

ಅವರು  ವಾಣಿ ಆಂಗ್ಲ ಮಾಧ್ಯಮ ಶಾಲೆ ಹಳೆಕೋಟೆ ಇದರ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮಕ್ಕಳು ಬಾಲ್ಯದಲ್ಲೇ ಸಾಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಾಯಕತ್ವ ಗುಣದೊಂದಿಗೆ ಸ್ವಾಭಿಮಾನದ ಗುಣವೂ ಬೆಳೆದಾಗ ಉತ್ತಮ ಸಾಧಕರಾಗಲು ಸಾಧ್ಯ. ಇಂದು ಯಾಂತ್ರೀಕರಣದಿಂದ ಕೆಲಸ ಕಾರ್ಯಗಳು ನಡೆಯುತ್ತಿರುವಾಗ ಸಮಯದ ಉಳಿಕೆಯಾಗುತ್ತಿದೆ. ಈ ಉಳಿಕೆ ಸಮಯವನ್ನು ಸದ್ಭಳಕೆಗೆ ಬಳಸುವ ಬಗ್ಗೆ ಎಲ್ಲರೂ ಚಿಂತಿಸಬೇಕು ಎಂದರು.

ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸೋಮೇಗೌಡ ಅಧ್ಯಕ್ಷತೆ ವಹಿಸಿದ್ದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಿವಶಂಕರ್ ಭಟ್ ಕೆ, ಶಾಲಾ ಪೋಷಕರ ಸಂಘದ ಅಧ್ಯಕ್ಷ ಅನಿಲ್ ನಾಯ್ಗ, ವಾಣಿ ಪಧವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯದುಪತಿಗೌಡ, ವಾಣಿ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜೇಗೌಡ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿಣಿ ಕೃಷ್ಣವೇಣಿ ಪಿ, ಶಾಲಾ ವಿಧ್ಯಾರ್ಥಿ ಸಂಘದ ಉಪನಾಯಕ ಶ್ರವಣ ಕುಮಾರ್ ಉಪಸ್ಥಿತರಿದ್ದರು.

ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಲಕ್ಷ್ಮೀ ನಾರಾಯಣ ಕೆ ವಾರ್ಷಿಕ ವರದಿ ಮಂಡಿಸಿದರು.

ಶಿಕ್ಷಕಿ ಮಾಧುರಿ ಸ್ವಾಗತಿಸಿದರು, ಶಿಕ್ಷಕರುಗಳಾದ ಪ್ರೀತಿ, ಸುಹಾಸಿನಿ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಶೈಕ್ಷಣಿಕ ಅವಧಿಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಾರ್ಷಿಕ ಕ್ರೀಡಾ ಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News