ಬ್ಯಾಂಕಿಗೆ ಕನ್ನ ಹಾಕಿದ ಮಲ್ಯ ಟ್ವಿಟ್ಟರ್ ಗೆ ಕನ್ನ !
ಹೊಸದಿಲ್ಲಿ,ಡಿ.9 : ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಬಾಕಿಯಿರಿಸಿ ದೇಶದಿಂದ ಪಲಾಯನಗೈದಿರುವ ಮದ್ಯ ದೊರೆ ವಿಜಯ್ ಮಲ್ಯ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.‘ದಿ ಲೀಜನ್ ’ ಎಂದು ತನ್ನನ್ನು ಕರೆದುಕೊಳ್ಳುವ ಹ್ಯಾಕರುಗಳ ತಂಡ ಇದರ ಹಿಂದೆ ಕೆಲಸ ಮಾಡಿದೆಯೆನ್ನಲಾಗುತ್ತಿದ್ದು ಈ ತಂಡವೇ ಇತ್ತೀಚೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಟ್ವಿಟ್ಟರ್ ಖಾತೆಗಳ ಹ್ಯಾಕ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗುತ್ತಿದೆ.
ಮಲ್ಯ ಅವರ ಟ್ವಿಟ್ಟರ್ ಖಾತೆಯ ಮೂಲಕ ಈ ತಂಡ ಹಲವಾರು ಟ್ವೀಟುಗಳನ್ನು ಮಾಡಿದ್ದು ಅವರ ಹಲವಾರು ಆನ್ ಲೈನ್ ಖಾತೆಗಳ ವಿವರಗಳನ್ನು ಬಹಿರಂಗ ಪಡಿಸಿದೆ. ಇದು ಕೇವಲ ಭಾಗಶಃ ಮಾಹಿತಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ವಿಚಾರ ಬಹಿರಂಗಗೊಳಿಸಲಿದ್ದೇವೆ ಎಂದು ತಂಡ ಹೇಳಿಕೊಂಡಿದೆ. ಮುಂದಿನ ಕೆಲ ದಿನಗಳಲ್ಲಿ ಲೀಜನ್ ಮಲ್ಯಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಬಹಿರಂಗಪಡಿಸುವುದಾಗಿ ಅದು ಎಚ್ಚರಿಸಿದೆ.
ತಮ್ಮನ್ನು ಬೆಂಬಲಿಸುವಂತೆ ಜನರನ್ನು ವಿನಂತಿಸಿದ ಹ್ಯಾಕರ್ಸ್ ತಂಡ ಮಲ್ಯರ ಲಂಡನ್ ವಿಳಾಸವನ್ನೂ ಟ್ವೀಟ್ ನಲ್ಲಿ ತಿಳಿಸಿದೆ.
ತರುವಾಯ ತಮ್ಮ ಖಾತೆ ಹ್ಯಾಕ್ ಆಗಿದೆ ಎಂಬುದನ್ನು ಅರಿತ ಮಲ್ಯ ‘‘ನನ್ನ ಖಾತೆ ಲೀಜನ್ ಎಂಬವರಿಂದ ಹ್ಯಾಕ್ ಆಗಿದೆ. ಅವರು ನನ್ನ ಹೆಸರಿನಲ್ಲಿ ಟ್ವೀಟ್ ಮಾಡುತ್ತಿದ್ದಾರೆ. ಅವುಗಳನ್ನು ನಿರ್ಲಕ್ಷ್ಯಿಸಿ. ನಾನು ಇದನ್ನು ಸರಿಪಡಿಸುತ್ತೇನೆ,’’ ಎಂದಿದ್ದಾರೆ.
‘‘ಲೀಜನ್ ಎಂಬ ಸಂಘಟನೆ ನನ್ನ ಇಮೇಲ್ ಖಾತೆ ಹ್ಯಾಕ್ ಮಾಡಿ ನನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದೆ. ಎಂತಹ ಜೋಕ್,’’ ಎಂದು ಇನ್ನೊಂದು ಟ್ವೀಟ್ ನಲ್ಲಿ ಮಲ್ಯ ಹೇಳಿಕೊಂಡಿದ್ದಾರೆ. ತರುವಾಯ ಹ್ಯಾಕರುಗಳು ತಾವೇನೂ ಮಲ್ಯ ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿಲ್ಲ, ಎಲ್ಲಾ ವಿಚಾರ ಸುಳ್ಳು. ಅವರು ಸುಮ್ಮನೆ ಸುಳ್ಳು ಹೇಳುತ್ತಿದ್ದಾರೆ, ಎಂದಿದ್ದಾರೆ.