ನೋಟು ರದ್ದತಿ ವಿಫಲವಾದರೆ ನಾನೇ ಹೊಣೆ ಎಂದಿದ್ದರು ಪ್ರಧಾನಿ ಮೋದಿ
ಹೊಸದಿಲ್ಲಿ, ಡಿ.9: ನವೆಂಬರ್ 8ರ ರಾತ್ರಿ ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1000 ರೂಪಾಯಿ ನೋಟುಗಳನ್ನು ಮಧ್ಯರಾತ್ರಿಯಿಂದಲೇ ನಿಷೇಧಿಸಲಾಗುವುದು ಎಂದು ಘೋಷಿಸಿದಾಗ ಅರೆ ಕ್ಷಣ ಇಡೀ ದೇಶವೇ ದಂಗಾಗಿ ಹೋಗಿತ್ತು. ಅದೊಂದು ಅಭೂತಪೂರ್ವ ನಿರ್ಧಾರವೆಂದು ಸರಕಾರ ಹೇಳಿಕೊಂಡರೆ ವಿಪಕ್ಷಗಳು ಸರಕಾರದ ಕ್ರಮದ ವಿರುದ್ಧ ಕಿಡಿ ಕಾರಿದ್ದವು. ಮರು ದಿನ ಬ್ಯಾಂಕು ಹಾಗೂ ಎಟಿಎಂಗಳ ಮುಂದೆ ಜನರು ತಮ್ಮಲ್ಲಿರುವ ಹಳೆ ನೋಟುಗಳನ್ನು ವಿನಿಮಯ ಮಾಡಲು ಯಾ ಠೇವಣಿಯಿಡಲು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲಲು ಆರಂಭಿಸಿದ್ದರು. ಹಲವೆಡೆ ಗೊಂದಲಕಾರಿ ವಾತಾವರಣ ನಿರ್ಮಾಣವಾಗಿತ್ತು ಹಾಗೂ ಅದು ಈಗಲೂ ಮುಂದುವರಿದಿದೆ.
ಇಂತಹ ಒಂದು ಮಹತ್ವದ ನಿರ್ಧಾರ ಕೈಗೊಳ್ಳಲು ಮೋದಿ ತಮ್ಮ ಜನಪ್ರಿಯತೆಯನ್ನೂ ಪಣವಾಗಿಟ್ಟಿದ್ದರು. ``ನಾನು ಎಲ್ಲಾ ರೀತಿಯಲ್ಲೂ ಅಧ್ಯಯನ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದೇನೆ. ಇದು ವಿಫಲವಾದರೆ ಅದಕ್ಕೆ ನಾನೇ ಜವಾಬ್ದಾರ'' ಎಂದು ಪ್ರಧಾನಿ ನವೆಂಬರ್ 8ರಂದು ತಾವು ನೋಟು ಅಮಾನ್ಯ ಘೋಷಣೆ ಮಾಡುವುದಕ್ಕಿಂತ ಸ್ವಲ್ಪವೇ ಮುಂಚಿತವಾಗಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೇಳಿದ್ದರೆಂದು ಆ ಸಭೆಯಲ್ಲಿ ಭಾಗವಹಿಸಿದ್ದ ಮೂವರು ಸಚಿವರು ಬಹಿರಂಗ ಪಡಿಸಿದ್ದಾರೆ.
ಈ ಪ್ರಮುಖ ನಿರ್ಧಾರ ಕೈಗೊಳ್ಳುವ ಸಲುವಾಗಿ ಅವರು ಭಾರೀ ವಿರೋಧ ಎದುರಿಸಬೇಕಾದಂತಹ ಸಂದರ್ಭದಲ್ಲಿಯೂ ಕ್ಷಿಪ್ರ ನಿರ್ಧಾರ ಕೈಗೊಂಡಿದ್ದರೆಂಬುದು ತಿಳಿದು ಬರುತ್ತದೆ.
ಪ್ರಧಾನಿ ನಿವಾಸದಲ್ಲಿ ತಂಗಿದ್ದ ವಿತ್ತ ಸಚಿವಾಲಯದ ಹಿರಿಯ ಅಧಿಕಾರಿ ಹಸ್ಮುಖ್ ಅಧಿಯಾ ನೇತೃತ್ವದ ಆರು ಮಂದಿಯ ತಂಡವೊಂದರ ಸಹಾಯದಿಂದ ಪ್ರಧಾನಿ ಈ ಇಡೀ ಕಾರ್ಯಯೋಜನೆಯನ್ನು ಸಿದ್ಧಪಡಿಸಿದ್ದಾರೆಂದು ಸುದ್ದಿ ಸಂಸ್ಥೆ ರೂಟರ್ಸ್ ವರದಿ ಮಾಡಿದೆ.
ಮೋದಿ 2003-06 ನಡುವೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ 58 ವರ್ಷದ ಈ ಅಧಿಕಾರಿ ಅವರಿಗೆ ಮುಖ್ಯ ಕಾರ್ಯದರ್ಶಿಯಾಗಿದ್ದರಲ್ಲದೆ ಈ ಅಧಿಕಾರಿಯೇ ಮೋದಿಗೆ ಯೋಗವನ್ನು ಪರಿಚಯಿಸಿದವರು ಎಂದು ತಿಳಿದು ಬಂದಿದೆ. ಮೋದಿ ಹಾಗೂ ಅಧಿಯಾ ನಡುವೆ ಪರಸ್ಪರ ನಂಬಿಕೆ ಹಾಗೂ ವಿಶ್ವಾಸವಿತ್ತು ಎಂದೂ ಹೇಳಲಾಗಿದೆ. ಅವರಿಬ್ಬರ ನಡುವೆ ಆಗಾಗ ನೇರ ಫೋನ್ ಸಂಪರ್ಕ ಕೂಡ ಇತ್ತೆನ್ನಲಾಗಿದ್ದು ಸಮಯ ಸಿಕ್ಕಾಗಲೆಲ್ಲಾ ಅವರಿಬ್ಬರೂ ವಿವಿಧ ವಿಚಾರಗಳ ಬಗ್ಗೆ ಗುಜರಾತಿಯಲ್ಲಿ ಸುದೀರ್ಘ ಸಂಭಾಷಣೆ ಮಾಡುತ್ತಿದ್ದರೆಂದು ವರದಿಯಾಗಿದೆ.
ನೋಟು ಅಮಾನ್ಯ ಯೋಜನೆ ಸಿದ್ಧ ಪಡಿಸಿದ್ದ ಅಧಿಯಾ ನೇತೃತ್ವದ ತಂಡಕ್ಕೆ ಎಲ್ಲಾ ವಿಚಾರಗಳಲ್ಲಿಯೂ ಅತ್ಯಂತ ಗೌಪ್ಯತೆಯನ್ನು ಕಾಯ್ದುಕೊಂಡು ಬರುವಂತೆ ಹೇಳಲಾಗಿತ್ತು. ಮೋದಿ ನಿವಾಸದಲ್ಲಿನ ಎರಡು ಕೊಠಡಿಗಳಲ್ಲಿದ್ದ ಯುವ ಸಂಶೋಧಕರ ತಂಡವೊಂದು ಅಧಿಯಾ ನೇತೃತ್ವದ ತಂಡಕ್ಕೆ ಸೂಕ್ತ ಸಹಾಯ ಮಾಡುತ್ತಿತ್ತೆನ್ನಲಾಗಿದೆ.