ಎಂಆರ್‌ಐ ಯಂತ್ರವನ್ನು 100 ಪಟ್ಟು ಅಗ್ಗವಾಗಿಸುವ ನೂತನ ಸಂಶೋಧನೆ
ಮುಂಬೈ,ಡಿ.9: ಇಲ್ಲಿಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಾಮೆಂಟಲ್ ರಿಸರ್ಚ್ (ಟಿಐಎಫ್‌ಆರ್)ನ ವಿಜ್ಞಾನಿಗಳ ನೂತನ ಸಂಶೋಧನೆಯು ಎಂಆರ್‌ಐ ಸ್ಕ್ಯಾನಿಂಗ್ ಯಂತ್ರಗಳನ್ನು 100 ಪಟ್ಟು ಅಗ್ಗವಾಗಿಸಲಿದೆ. ಇದರೊಂದಿಗೆ ಭವಿಷ್ಯದಲ್ಲಿ ರೋಗಿಗಳಿಗೆ ಎಂಆರ್‌ಐ ಸ್ಕ್ಯಾನಿಂಗ್ ವೆಚ್ಚವು ಕಡಿಮೆಯಾಗುವ ನಿರೀಕ್ಷೆಯಿದೆ.
ಬಿಸ್ಮತ್ ಲೋಹವು ಯಾವುದೇ ಪ್ರತಿರೋಧವಿಲ್ಲದೆ ವಿದ್ಯುತ್‌ನ್ನು ಪ್ರವಹಿಸುವ ಸಾಮರ್ಥ್ಯ ಹೊಂದಿರುವುದನ್ನು ವಿಜ್ಞಾನಿಗಳ ತಂಡವು ಕಂಡು ಹಿಡಿದಿದೆ. ತನ್ಮೂಲಕ ಬಿಸ್ಮತ್ ‘ಸೂಪರ್ ಕಂಡಕ್ಟರ್ ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ನೂತನ ಸಂಶೋಧನೆಯು ಲೋಹಗಳು ಹೇಗೆ ‘ಸೂಪರ್ ಕಂಡಕ್ಟರ್ ’ಆಗುತ್ತವೆ ಎನ್ನುವುದನ್ನು ವಿವರಿಸಿರುವ ನಾಲ್ಕು ದಶಕಗಳ ನೊಬೆಲ್ ಪ್ರಶಸ್ತಿ ಪುರಸ್ಕೃತ ಥಿಯರಿಯನ್ನು ಬದಲಿಸಲಿದೆ.
ಬಿಸ್ಮತ್ ಅತ್ಯಂತ ವೇಗದ ವಿದ್ಯುತ್ ವಾಹಕ ಎನ್ನುವುದನ್ನು ನಾವು ಕಂಡು ಹಿಡಿದಿದ್ದು, ಇದನ್ನು ವಿವರಿಸಲು ನಮಗೆ ನೂತನ ಥಿಯರಿ ಮತ್ತು ನೂತನ ವ್ಯವಸ್ಥೆಯ ಅಗತ್ಯವಿದೆ. ಅದು ಸಾಧ್ಯವಾದ ಬಳಿಕ ಸೂಪರ್ ಕಂಡಕ್ಟರ್‌ಗಳ ಹೊಸ ವರ್ಗವನ್ನು ನಾವು ಹೊಂದಬಹುದಾಗಿದೆ ಎಂದು ಟಿಐಎಫ್‌ಆರ್‌ನ ಪ್ರೊ.ಎಸ್.ರಾಮಕೃಷ್ಣನ್ ಹೇಳಿದರು.
ಸೂಪರ್ ಕಂಡಕ್ಟರ್ ಶೋಧಕ್ಕಾಗಿ ಹಲವಾರು ಜಾಗತಿಕ ಪ್ರಯತ್ನಗಳು ವಿಫಲಗೊಂಡಿರುವ ಹಿನ್ನೆಲೆಯಲ್ಲಿ ತನ್ನ ಸಂಶೋಧನೆಯು ಮೂಲಭೂತ ವೈಜ್ಞಾನಿಕ ಸಾಧನೆಯಾಗಿದೆ ಎಂದು ವಿಜ್ಞಾನಿಗಳ ತಂಡವು ಬಣ್ಣಿಸಿದೆ. ಬಿಸ್ಮತ್ ವಿದ್ಯುಚ್ಛಕ್ತಿಗೆ ಎಲ್ಲ ಪ್ರತಿರೋಧವನ್ನು ಕಳೆದೊಕೊಳ್ಳುವಂತಾಗಲು ವಿಜ್ಞಾನಿಗಳು ಅದನ್ನು ಅತ್ಯಂತ ಶೀತ ತಾಪಮಾನದಲ್ಲಿರಿಸುವ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ.
ಪ್ರಸಕ್ತ ಎಂಆರ್‌ಐ ಯಂತ್ರಗಳಲ್ಲಿ ನಿಯೊಬಿಂ-ಟಿಟಾನಿಯಂ ಮಿಶ್ರಲೋಹದಿಂದ ನಿರ್ಮಿಸಲಾದ ಸೂಪರ್ ಕಂಡಕ್ಟರ್‌ಗಳನ್ನು ಬಳಸಲಾಗುತ್ತಿದೆ. ಉತ್ತಮ ಎಂಆರ್‌ಐ ಯಂತ್ರಕ್ಕೆ 10 ಕೋ.ರೂ.ಗಳನ್ನು ತೆರಬೇಕಾಗುತ್ತದೆ.
ತಮ್ಮ ಸಂಶೋಧನೆಯನ್ನು ಎಂಆರ್‌ಐ ಯಂತ್ರದಲ್ಲಿ ಅಳವಡಿಸಲು ದೀರ್ಘ ಸಮಯ ಅಗತ್ಯವಾಗಬಹುದು,ಆದರೆ ಅದು ಯಂತ್ರವನ್ನು ಏನಿಲ್ಲವೆಂದರೂ 100 ಪಟ್ಟು ಅಗ್ಗವಾಗಿಸುತ್ತದೆ ಎಂಬ ಭರವಸೆಯನ್ನು ತಂಡವು ನೀಡಿದೆ.
ಸದ್ಯಕ್ಕೆ ಬಿಸ್ಮತ್‌ನ ಸೂಪರ್ ಕಂಡಕ್ಟರ್ ಗುಣವನ್ನು ವಿವರಿಸಲು ಯಾವುದೇ ಥಿಯರಿಗಳಿಲ್ಲ. ಇತರ ಲೋಹಗಳಿಗೆ ಹೋಲಿಸಿದರೆ ಇದು ವಿಭಿನ್ನ ಬಗೆಯ ಸೂಪರ್ ಕಂಡಕ್ಟಿವಿಟಿಯಾಗಿದೆ. ಥಿಯರಿಸ್ಟ್‌ಗಳು ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಮತ್ತು ಹೊಸ ಥಿಯರಿಗಳು ಹೊರಹೊಮ್ಮಬಹುದು. ಈಗ ಸುಪರ್ ಕಂಡಕ್ಟಿಂಗ್ ಆಯಸ್ಕಾಂತದಿಂದಾಗಿ ಮಾತ್ರ ಎಂಆರ್‌ಐ ಸ್ಕಾನಿಂಗ್ ಸಾಧ್ಯವಾಗುತ್ತಿದೆ. ಹೀಗಾಗಿ ನೂತನ ಸಂಶೋಧನೆಯು ಕೆಲವು ವರ್ಷಗಳಲ್ಲಿ ಅನ್ವಯಗೊಳ್ಳಲಿದೆ ಎಂದು ಟಿಐಎಫ್‌ಆರ್‌ನ ಸಹಾಯಕ ಪ್ರೊಫೆಸರ್ ಡಾ.ಆರ್ಮುಗಂ ತಮಿಳವೇಲ್ ತಿಳಿಸಿದರು.