ನೋಟು ಅಮಾನ್ಯ ನೀತಿ ರಹಸ್ಯವಾಗಿತ್ತೇ?
ಹೊಸದಿಲ್ಲಿ,ಡಿ.9: ನೋಟು ಅಮಾನ್ಯ ನಿರ್ಧಾರವನ್ನು ಅತ್ಯಂತ ರಹಸ್ಯವಾಗಿ ತೆಗೆದುಕೊಳ್ಳಲಾಗಿತ್ತೇ ಎಂದು ಸವೋಚ್ಚ ನ್ಯಾಯಾಲಯವು ಇಂದು ಕೇಂದ್ರ ಸರಕಾರ ವನ್ನು ಪ್ರಶ್ನಿಸಿತು. ಇಡೀ ರಾಷ್ಟ್ರವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿರುವುದರ ಹಿಂದಿನ ಉದ್ದೇಶವನ್ನು ಕೇಳಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿದೆ.
500 ಮತ್ತು 1,000 ರೂ.ನೋಟುಗಳನ್ನು ನಿಷೇಧಿಸುವ ನಿರ್ಧಾರವನ್ನು ನೀವು ಕೈಗೊಂಡಾಗ ಅದು ಗೌಪ್ಯವಾಗಿತ್ತೇ ಎಂದು ನ್ಯಾಯಾಲಯವು ಕೇಂದ್ರವನ್ನು ಪ್ರಶ್ನಿಸಿತು. ನೋಟು ರದ್ದತಿ ಕ್ರಮವು ಸಂವಿಧಾನಬದ್ಧವೇ ಅಲ್ಲವೇ ಎನ್ನುವುದನ್ನು ನಿರ್ಧರಿಸಲು ಮೂವರು ನ್ಯಾಯಾಧೀಶರ ಪೀಠವು ಒಂಭತ್ತು ಪ್ರಶ್ನೆಗಳನ್ನು ರೂಪಿಸಿದೆ.
ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ್ ಅವರು, ನೋಟು ನಿಷೇಧದಿಂದಾಗಿ ಉದ್ಭವಿಸಿರುವ ಸ್ಥಿತಿಯನ್ನು ನಿಭಾಯಿಸಲು ಸರಕಾರವು ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ ಎಂದು ವಾದಿಸಿದರು. ಎಟಿಎಂಗಳಲ್ಲಿ ಹಣವಿಲ್ಲ. ಹೊಸನೋಟುಗಳ ವಿರತಣೆಗಾಗಿ ಈ ಯಂತ್ರಗಳನ್ನು ಸರಿಯಾಗಿ ಮಾರ್ಪಡಿಸಲಾಗಿಲ್ಲ ಮತ್ತು ಸಹಕಾರಿ ಬ್ಯಾಂಕುಗಳ ವಿರುದ್ಧ ತಾರತಮ್ಯ ವೆಸಗಲಾಗುತ್ತಿದೆ ಎಂದೂ ಅವರು ಹೇಳಿದರು.
ಪ್ರಕರಣದ ಮುಂದಿನ ವಿಚಾರಣೆ ಡಿ.14ರಂದು ನಡೆಯಲಿದೆ.
ನ.8ರಂದು ನೋಟು ರದ್ದತಿಯನ್ನು ಘೋಷಿಸಿದ ಬಳಿಕ ಜನರು ಎದುರಿಸುತ್ತಿರುವ ತೊಂದರೆಗಳನ್ನು ತಗ್ಗಿಸಲು ಏನಾದರೂ ಮಾಡಲು ಸಾಧ್ಯವೇ ಎನ್ನುವುದನ್ನು ಪರಿಶೀಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಕಳೆದ ವಾರ ಸರಕಾರಕ್ಕೆ ಸೂಚಿಸಿತ್ತು.