ಮಾತೃಭಾಷೆಯ ಬಗ್ಗೆ ಅಭಿಮಾನವಿರಲಿ : ಮನೋಹರ್ ಪ್ರಸಾದ್
ಮೂಡುಬಿದಿರೆ, ಡಿ.9 : ಕನ್ನಡದ ಹಬ್ಬಗಳು ಮನಸ್ಸುಗಳನ್ನು ಅರಳಿಸುವಂತಿರಬೇಕು. ನಮ್ಮ ಸಂಸ್ಕೃತಿ, ಸಾಹಿತ್ಯ, ಸಂಪ್ರದಾಯ ಅರಿತು ಬೆರೆತರೆ ಮನಸ್ಸು ಪ್ರಫುಲವಾಗುತ್ತದೆ. ನಮ್ಮ ಮಾತೃಭಾಷೆಯು ಮನಸ್ಸುಗಳನ್ನು ಕಟ್ಟುವಂತಹ ಕೆಲಸಗಳನ್ನು ಮಾಡುತ್ತದೆ. ಆದುದರಿಂದ ಭಾಷೆಯ ಮೇಲೆ ಸಂಪೂರ್ಣ ಹಿಡಿತ, ಪ್ರೀತಿ ಮತ್ತು ಅಭಿಮಾನವಿರಲಿ ಎಂದು ಪತ್ರಕರ್ತ ಮನೋಹರ್ ಪ್ರಸಾದ್ ಹೇಳಿದರು.
ಅವರು ಮೂಡುಬಿದಿರೆ ಸಮೀಪದ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಕ್ಯಾಂಪಸ್‌ನಲ್ಲಿ ಶುಕ್ರವಾರ ನಡೆದ ಎಕ್ಸಲೆಂಟ್ ಫೆಸ್ಟ್ "ಕನ್ನಡಹಬ್ಬ" ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಾವಿರುವ ಪ್ರದೇಶದ ಹಿನ್ನಲೆಯನ್ನು ತಿಳಿದುಕೊಳ್ಳುವುದರಿಂದ ಆ ಪ್ರದೇಶದೊಂದಿಗೆ ಮತ್ತಷ್ಟು ಆಪ್ತವಾಗಲು ಸಾಧ್ಯವಾಗುತ್ತದೆ. ಹೊಸ ತಲೆಮಾರಿನನವರು ಹೆಚ್ಚು ಅಂತರ್ಮುಖಿಗಳಾಗುತ್ತಿದ್ದಾರೆ. ಮನಸ್ಸುಗಳನ್ನು ಸಾಹಿತ್ಯದೆಡೆಗೆ ಅರಳಿಸಲು ಕನ್ನಡ ಹಬ್ಬದಂತ ಕಾರ್ಯಕ್ರಮಗಳು ಶಿಕ್ಷಣ ಸಂಸ್ಥೆಗಳಲ್ಲಿ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಪಡ್ಯಾರಬೆಟ್ಟು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಜೀವಂಧರ್ ಜೈನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಭಾಷೆಯನ್ನು ಬೆಳೆಸಲು ನಾವು ಬದ್ಧರಾಗಿದ್ದೇವೆ ಎಂಬ ಪ್ರತಿಜ್ಞೆ, ದೃಢತೆ ನಮ್ಮಲ್ಲಿರಬೇಕು. ಭಾಷೆಗಳ ಮಧ್ಯೆ ಧ್ವೇಷವಿರಬಾರದು. ಭಾಷೆಗಳ ಬಗ್ಗೆ ಗೌರವದ ಜೊತೆಗೆ ರಾಷ್ಟ್ರೀಯ ಐಕ್ಯತೆಯಿರಬೇಕು ಎಂದರು.
ಎಕ್ಸಲೆಂಟ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಯುವರಾಜ್ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿದರು.
ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್, ಕಾಲೇಜಿನ ಪ್ರಾಂಶುಪಾಲ ಸುರೇಶ್ ಬಾಬು, ಎಕ್ಸಲೆಂಟ್ ಪ್ರೌಢಶಾಲಾ ಮುಖ್ಯ ಶಿಕ್ಷಕ ಶಾಂತಿರಾಜ್ ಜೈನ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ನವೀನ್ ಮರಿಕೆ ವೇದಿಕೆಯಲ್ಲಿದ್ದರು.
ಪ್ರಫುಲ್ಲಚಂದ್ರ ಸ್ವಾಗತಿಸಿದರು. ಪ್ರದೀಪ್ ಅಂಚನ್, ಶ್ರೀಹರ್ಷ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ಧೀರಜ್, ವರ್ಷಾ ಕಾರ್ಯಕ್ರಮ ನಿರೂಪಿಸಿದರು. ಸಕಾಮೃತ ವಂದಿಸಿದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.