×
Ad

ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಲು ಸಹಕರಿಸಿ: ಸಚಿವ ರಮೇಶ್ ಕುಮಾರ್

Update: 2016-12-09 18:08 IST

 ಮಂಗಳೂರು, ಡಿ.9: ಬಡ ರೋಗಿಗಳ ಹಿತದೃಷ್ಟಿಯಿಂದ ಕಾರ್ಯಾಚರಿಸುವ ಸರಕಾರಿ ಆಸ್ಪತ್ರೆಗಳ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಸಮಸ್ಯೆಯಾಗಲಿದೆ. ವೈದ್ಯಕೀಯ ಕ್ಷೇತ್ರವು ಲಾಭದ ನಿರೀಕ್ಷೆಯ ಕ್ಷೇತ್ರವಲ್ಲ. ಇದು ಸೇವಾಮನೋಭಾವದ ಕ್ಷೇತ್ರವಾಗಿದೆ. ಸರಕಾರಿ ಆಸ್ಪತ್ರೆಗಳ ಮತ್ತಷ್ಟು ಸೇವೆಯನ್ನು ಜನರಿಗೆ ನೀಡಲು ಇಲಾಖೆ ಕಟಿಬದ್ಧವಾಗಿದೆ. ಹಾಗಾಗಿ ‘ಡಿ’ ಗ್ರೂಪ್ ನೌಕರರಿಂದ ಹಿಡಿದು ವೈದ್ಯರು, ಅಧಿಕಾರಿಗಳು ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಲು ಸಹಕರಿಸಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ಹೇಳಿದರು.

 ‘ವೆನ್ಲಾಕ್ ಆ್ಯಂಬುಲೆನ್ಸ್ ರೆಸ್ಪಾಂಟ್ ಸರ್ವಿಸ್, ಜನಸಂಜೀವಿನಿ ಔಷಧಿ ಮಳಿಗೆ, ಸಂಯುಕ್ತ ಆಯುಷ್, ವಿಶೇಷ ಚಿಕಿತ್ಸಾ ಘಟಕ, ಹೊರರೋಗಿ ಕ್ಷ-ಕಿರಣ ವಿಭಾಗ, ನವೀಕೃತ ಸೆಲ್‌ವಾರ್ಡ್’ನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರಿಂದ ಮಾನವ ಸಮಾಜ ಬಹಳ ನಿರೀಕ್ಷೆ ಇಟ್ಟುಕೊಂಡಿವೆ. ವೈದ್ಯಕೀಯ ಕ್ಷೇತ್ರದಲ್ಲಿರುವವರು ಯಾರಿಗೂ ಜೀವ ಕೊಡಲಾರರು. ಹಾಗಂತ ಪ್ರಾಣ ಕಸಿಯುವ ಅಧಿಕಾರವೂ ಇಲ್ಲ. ಪ್ರಾಮಾಣಿಕವಾಗಿ ರೋಗಿಯ ಆರೈಕೆ, ಸುಶ್ರೂಷೆ ನೀಡುವುದು ಮುಖ್ಯವಾಗಿದೆ. ಒಂದು ವೇಳೆ ನಿರ್ಲಕ್ಷ, ಅಪ್ರಮಾಣಿಕತೆಯಿಂದ ಪ್ರಾಣ ಕಸಿದರೆ ಅದು ಕೊಲೆ ಮಾಡಿದವನಿಗಿಂತಲೂ ಹೀನ ಕೆಲಸ ಎಂದು ರಮೇಶ್ ಕುಮಾರ್ ನುಡಿದರು.

ಸರಕಾರಿ ಆಸ್ಪತ್ರೆಯ ಸಿಬ್ಬಂದಿಯಿಂದ ಹಿಡಿದು ವೈದ್ಯರು, ಅಧಿಕಾರಿಗಳು ಹಸನ್ಮುಖಿಗಳಾಗಿ ಸೇವೆ ಸಲ್ಲಿಸಬೇಕು. ಇದರಿಂದ ರೋಗಿಯ ಅರ್ಧಕ್ಕರ್ಧ ರೋಗ ಗುಣಮುಖವಾದಂತೆ. ಸಹನೆಯ ಪ್ರತೀಕವಾದ ಮದರ್ ತೆರೆಸಾ ವೈದ್ಯಕೀಯ ಕ್ಷೇತ್ರದ ಪ್ರತಿಯೊಬ್ಬರಿಗೂ ಮಾದರಿಯಾಗೇಕು. ಸರಕಾರಿ ಆಸ್ಪತ್ರೆಯಲ್ಲಿ ಲಂಚಕ್ಕೆ ಪೀಡಿಸಲಾಗುತ್ತದೆ. ಸಮರ್ಪಕ ಸೇವೆ ನೀಡಲಾಗುತ್ತಿಲ್ಲ ಎಂದೆಲ್ಲಾ ಅಪಪ್ರಚಾರ ಮಾಡಲಾಗುತ್ತದೆ. ಇಲ್ಲಿ ಅಂತಹ ಸೇವೆ ನೀಡಲಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗುವ ಶ್ರೀಮಂತರು ಕೂಡ ಮುಂದೊಂದು ದಿನ ಸರಕಾರಿ ಆಸ್ಪತ್ರೆಗೆ ಬರುವಂತಹ ವಾತಾವರಣವನ್ನು ಎಲ್ಲ ಸಿಬ್ಬಂದಿ-ಅಧಿಕಾರಿ ವರ್ಗ ಸೃಷ್ಟಿಸಬೇಕು ಎಂದು ರಮೇಶ್ ಕುಮಾರ್ ಕರೆ ನೀಡಿದರು.

ಅನಿಯಂತ್ರಿತವಾಗಿ ಔಷಧಗಳ ದರ ನಿಯಂತ್ರಣಕ್ಕಾಗಿ ಜನರಿಕ್ ಔಷಧ ಮಳಿಗೆಗಳನ್ನು ತೆರೆಯಲಾಗಿದೆ. ಅದರ ಸದುಪಯೋಗ ಪಡೆದುಕೊಳ್ಳುವಂತೆ ಸಚಿವ ರಮೇಶ್ ಕುಮಾರ್ ಹೇಳಿದರು.

ಶಾಸಕ ಜೆ.ಆರ್.ಲೋಬೊ ಅಧ್ಯಕ್ಷತೆ ವಹಿಸಿದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ನಿರ್ದೇಶಕ ಡಾ.ಪಿ.ಎಲ್. ನಟರಾಜ್, ಡಿಎಚ್‌ಒ ಡಾ.ಎಂ. ರಾಮಕೃಷ್ಣ ರಾವ್, ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ ಎಚ್.ಆರ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News