ಮಂಗಳೂರು: ‘ಬೀದಿ ಬದಿ ವ್ಯಾಪಾರಸ್ಥರ ವಲಯ’ ಉದ್ಘಾಟನೆ

Update: 2016-12-09 12:48 GMT

ಮಂಗಳೂರು, ಡಿ.9: ಮಂಗಳೂರು ಮನಪಾ ಹಾಗೂ ಪೊಲೀಸರಿಂದ ನಿರಂತರವಾಗಿ ದೌರ್ಜನ್ಯಕ್ಕೊಳಕ್ಕಾಗುತ್ತಿದ್ದ ಬೀದಿಬದಿ ವ್ಯಾಪಾರಸ್ಥರಿಗೆ ಇದೀಗ ಮನಪಾ ಆಡಳಿತವು ನಗರದ ಪುರಭವನದ ಸಮೀಪ ಸುಸಜ್ಜಿತ ‘ಬೀದಿ ಬದಿ ವ್ಯಾಪಾರಸ್ಥರ ವಲಯ’ವನ್ನು ತೆರೆದುಕೊಟ್ಟಿದೆ.

ನಗರದ ಸ್ಟೇಟ್‌ಬ್ಯಾಂಕ್, ವೆನ್ಲಾಕ್ ಆಸ್ಪತ್ರೆ, ಲೇಡಿಗೋಶನ್ ಆಸ್ಪತ್ರೆ ಸಹಿತ ಆಸುಪಾಸಿನ ಬೀದಿ ಬದಿಗಳಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳ ಮೇಲೆ ಅಧಿಕಾರಿಗಳು ಪ್ರಹಾರ ಮಾಡುತ್ತಲೇ ಇದ್ದರು. ಇದರಿಂದ ನೊಂದ ವ್ಯಾಪಾರಿಗಳು ಆಗಾಗ ಪ್ರತಿಭಟನೆ, ಧರಣಿ ನಡೆಸುತ್ತಿದ್ದರು. ಅಲ್ಲದೆ ದ.ಕ.ಜಿಲ್ಲಾ ಬೀದಿ ವ್ಯಾಪಾರಸ್ಥರ ಸಂಘ’ವೂ ರಚಿಸಲ್ಪಟ್ಟಿತ್ತು. ವ್ಯಾಪಾರ ಮಾಡಲು ಸೂಕ್ತ ಸ್ಥಳಾವಕಾಶ ಕಲ್ಪಿಸುವಂತೆ ಸಂಘ ಆಗ್ರಹಿಸಿ ಹೋರಾಟ ತೀವ್ರಗೊಳಿಸಿತ್ತು.

ಇದೀಗ ಪಾಲಿಕೆಯು ಬೀದಿಬದಿ ವ್ಯಾಪಾರಸ್ಥರು ಒಂದೇ ಕಡೆ ವ್ಯಾಪಾರ ಮಾಡುವ ಸಲುವಾಗಿ ಸುಸಜ್ಜಿತ ವಲಯವನ್ನು ಗುರುತಿಸಿದೆ. ಇಂಟರ್‌ಲಾಕ್ ಅಳವಡಿಸಿ ವ್ಯಾಪಾರ ಮಾಡುವ ಸ್ಥಳವನ್ನು ಸುಸಜ್ಜಿತಗೊಳಿಸಿದೆ. ಇಲ್ಲಿನ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ನೀಡುವ ಪ್ರಕ್ರಿಯೆಯೂ ನಡೆಯಲಿದೆ. ಸದ್ಯ ಸುಮಾರು 200ರಷ್ಟು ವ್ಯಾಪಾರಿಗಳು ಇಲ್ಲಿ ವ್ಯಾಪಾರ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ 400ರಷ್ಟು ಬೀದಿ ಬದಿ ವ್ಯಾಪಾರಿಗಳು ಇಲ್ಲಿ ವ್ಯಾಪಾರ ಮಾಡಲು ಸ್ಥಳಾವಕಾಶವಿದೆ.

ಮಂಗಳೂರು ಮೇಯರ್ ಹರಿನಾಥ್ ‘ಬೀದಿ ಬದಿ ವ್ಯಾಪಾರಸ್ಥರ ವಲಯ’ವನ್ನು ಶುಕ್ರವಾರ ಉದ್ಘಾಟಿಸಿದರು.

ಪಾಲಿಕೆಯ ಆಯುಕ್ತ ಮುಹಮ್ಮದ್ ನಝೀರ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಲ್ಯಾನ್ಸಿ ಲಾಟ್ ಪಿಂಟೊ, ದೀಪಕ್ ಪೂಜಾರಿ, ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್, ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್.ಎಸ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News