ಗಾಂಜಾ ಮಾರಾಟ: ಇಬ್ಬರ ಬಂಧನ
Update: 2016-12-09 23:16 IST
ಮಂಗಳೂರು, ಡಿ. 9: ನಗರದ ಹೊರ ವಲಯದ ಕಾವೂರು ವಿದ್ಯಾನಗರದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಕಾವೂರು ಪೊಲೀಸರು ಶುಕ್ರವಾರ ಇಬ್ಬರನ್ನು ಬಂಧಿಸಿದ್ದಾರೆ.
ಕುಳಾಯಿ ರಾಯಿಕಟ್ಟೆ ನಿವಾಸಿಗಳಾದ ಶರೀಫ್ ಯಾನೆ ಚೊಟ್ಟೆ ಶರೀಫ್ ಮತ್ತು ಬಶೀರ್ ಬಂಧಿತ ಆರೋಪಿಳು. ಇವರಿಂದ 8 ಸಾವಿರ ರೂ. ವೌಲ್ಯದ 320 ಗ್ರಾಂ ಗಾಂಜಾ ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಸ್ಕೂಟರ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾವೂರು ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ನಟರಾಜ್ ಸಿಬ್ಬಂದಿಗಳೊಂದಿಗೆ ವಿದ್ಯಾನಗರದಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಕುಳೂರು ಕಡೆಯಿಂದ ಕಾವೂರು ಕಡೆಗೆ ಬರುತ್ತಿದ್ದ ಸ್ಕೂಟರನ್ನು ತಪಾಸಣೆ ಮಾಡಿದಾಗ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಶರೀಫ್ ಈ ಹಿಂದೆ ಕೂಡಾ ಗಾಂಜಾ ಮಾರಾಟ ಮಾಡಿದ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.