ಆಡಳಿತಾತ್ಮಕ ಒತ್ತಡಗಳಿಂದ ಅಧ್ಯಾಪಕನಲ್ಲಿ ಸಿನಿಕತನ ಹೆಚ್ಚುತ್ತಿವೆ: ಅರವಿಂದ ಚೊಕ್ಕಾಡಿ
ಮಂಗಳೂರು, ಡಿ.10: ಜ್ಞಾನಕ್ಕೆ ಸಂಬಂಧಿಸಿದ ಪ್ರಕ್ರಿಯೆಯಲ್ಲಿ ಇತ್ತೀಚೆಗೆ ಹೇರಿಕೆ, ಸಾಮಾಜಿಕ ಮತ್ತು ಆಡಳಿತಾತ್ಮಕ ಒತ್ತಡಗಳಿಂದ ಅಸಹಾಯಕನಾಗುವ ಅಧ್ಯಾಪಕನಲ್ಲಿ ಸಿನಿಕತನ ಹೆಚ್ಚುತ್ತಿವೆ ಎಂದು ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ಅಭಿಪ್ರಾಯಪಟ್ಟರು.
ಕರಾವಳಿ ಲೇಖಕಿಯರ-ವಾಚಕಿಯರ ಸಂಘ, ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆ ಮತ್ತು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ದೇವಕಿಯಮ್ಮ, ಚಂದ್ರಭಾಗಿ ರೈ, ರಾಧಾಬಾಯಿ ನಾರಾಯಣಬಾಬು ದತ್ತಿನಿಧಿ ಕಾರ್ಯಕ್ರಮದಲ್ಲಿ ಬಿ.ಎಂ. ರೋಹಿನಿಯವರ ‘ಅಧ್ಯಾಪಕಿಯರ ಅಧ್ವಾನ’ ಕೃತಿಯ ಹಿನ್ನೆಲೆಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ವ್ಯಕ್ತಿಯ ಯೋಚನೆ ಮತ್ತು ಭಾಷೆಯ ನಡುವೆ ಸೂಕ್ಷ್ಮ ಸಂಬಂಧವಿರುತ್ತದೆ. ಭಾಷೆ ಭಾವಕೋಶದ ಮೇಲೆ ಸಂವಹನ ಮಾಡುವ ಒಂದು ವಿಧಾನವಾಗಿದ್ದು, ಸಂಕುಚಿತ ಭಾವನೆಯನ್ನು ತೊಡೆದು ತರ್ಕದ ಮೂಲಕ ನಮ್ಮಿಳಗಿನ ಸಂಶೋಧಕ ಪ್ರವೃತ್ತಿಯನ್ನು ಗಟ್ಟಿಗೊಳಿಸುತ್ತದೆ. ಇದನ್ನು ಸಶಕ್ತವಾಗಿ ಬಳಸುವ ಮತ್ತು ಜ್ಞಾನ ಪರಂಪರೆಯನ್ನು ಭಾಷೆಯಾಗಿ ಪರಿವರ್ತಿಸುವುದು ಅಧ್ಯಾಪಕರಿಗೆ ತಿಳಿದಿರಬೇಕು ಎಂದು ಅರವಿಂದ ಚೊಕ್ಕಾಡಿ ಹೇಳಿದರು.
ಸಂಘದ ಅಧ್ಯಕ್ಷೆ ಡಾ.ಶೈಲಾ ಯು. ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ನಾಗೇಂದ್ರ ಮದ್ಯಸ್ಥ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದ ಕೌಶಲ್ಯಗಳನ್ನು ಕಲಿಸುವುದು ಶಿಕ್ಷಕ ವೃತ್ತಿಯ ಅವಿಭಾಜ್ಯ ಅಂಗ. ಶಿಕ್ಷಣದಲ್ಲಿನ ಆಧುನಿಕ ಬದಲಾವಣೆಗೆ ಹೊಂದಿಕೊಂಡು ಅದನ್ನು ಮೀರಿ ಬೆಳೆಯಲು ಶಿಕ್ಷಕರು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಬಿ.ಎಂ.ರೋಹಿನಿಯವರ ಕೃತಿ ‘ಅಧ್ಯಾಪಕಿಯರ ಅಧ್ವಾನ’ ಕುರಿತ ವಿಮರ್ಶ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಜ್ಯೋತಿ, ಯಲ್ಲಪ್ಪ ಎಂ. ಕಳ್ಳಿಮರದ, ವ್ನಿೇಶ ನಾಯ್ಕ, ಯಶ್ವಿತಾ ಜಿ.ಆರ್., ರಮ್ಯಾ ಪಿ.ಎ. ಅವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭ ಪಿ.ಎಚ್.ಡಿ. ವಿಭಾಗದ ಮಖ್ಯಸ್ಥ ಬಸವರಾಜ, ಲೇಖಕರ ಸಂಘದ ಅಧ್ಯಕ್ಷ ಶಿವಪ್ರಸಾದ, ಅನಸೂಯಾ ಉಪಸ್ಥಿತರಿದ್ದರು.