×
Ad

ವಿಶ್ವ ದಾಖಲೆಗೆ ಸಜ್ಜಾದ ಮೊಟೆರಾದ ಸರ್ದಾರ್ ಪಟೇಲ್ ಸ್ಟೇಡಿಯಮ್

Update: 2016-12-10 19:15 IST

ಅಹ್ಮದಾಬಾದ್, ಡಿ.10: ಆಸ್ಟ್ರೇಲಿಯದ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ (ಎಂಸಿಸಿ) ಪ್ರಸ್ತುತ ಆಸನ ಸಾಮರ್ಥ್ಯದಲ್ಲಿ ವಿಶ್ವದ ದೊಡ್ಡ ಕ್ರೀಡಾಂಗಣವಾಗಿದೆ. ಆದರೆ ವರ್ಷದೊಳಗೆ ಈ ಕ್ರೀಡಾಂಗಣವನ್ನು ಮೀರಿಸುವ ಇನ್ನೊಂದು ಕ್ರೀಡಾಂಗಣ ಸಿದ್ಧವಾಗಲಿದೆ.

ಅಹ್ಮದಾಬಾದ್‌ನ ಮೊಟೆರಾದ ಸರ್ದಾರ್ ಪಟೇಲ್ ಕ್ರಿಕೆಟ್ ಸ್ಟೇಡಿಯಂ ಶೀಘ್ರವೇ ಪುನರ್ ನಿರ್ಮಾಣವಾಗಲಿದ್ದು, ಹೊಸ ದಾಖಲೆ ನಿರ್ಮಿಸಲು ಸಜ್ಜಾಗಲಿದೆ.

ಮೊಟೆರಾದಲ್ಲಿ ಈ ಮೊದಲು 54,000 ಮಂದಿಗೆ ಕ್ರಿಕೆಟ್ ವೀಕ್ಷಣೆಗೆ ಆಸನಗಳ ಸೌಲಭ್ಯ ಇತ್ತು. ಮುಂದೆ ಆಸನಗಳ ಸಾಮರ್ಥ್ಯ 1,10,000ಕ್ಕೆ ಏರಲಿದೆ. ಎಂಸಿಸಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸನಗಳ ಸಾಮರ್ಥ್ಯ 100,024 ರಷ್ಟಿದೆ.

ವಿಶ್ವದಲ್ಲಿ ಬೃಹತ್ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾಗಿದೆ. ಮೋದಿ ಗುಜರಾತ್ ಕ್ರಿಕೆಟ್ ಸಂಸ್ಥೆಯ(ಜಿಸಿಸಿ) ಅಧ್ಯಕ್ಷರಾಗಿದ್ದಾಗ ಈ ಯೋಜನೆ ರೂಪಿಸಿದ್ದರು. ಇದೀಗ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನೂತನ ಸ್ಟೇಡಿಯಂನ ನಿರ್ಮಾಣ ಕಾಮಗಾರಿ ಎರಡು ವರ್ಷಗಳಲ್ಲಿ ಕೊನೆಗೊಳ್ಳಲಿದೆ. ನಿರ್ಮಾಣ ಕಂಪೆನಿಗೆ ಮೈದಾನವನ್ನು ನೀಡಲು ಎಲ್ಲ ಸಿದ್ಧತೆ ನಡೆದಿದೆ. ನೂತನ ಸ್ಟೇಡಿಯಂ ವಿಶ್ವದ ಅತ್ಯಂತ ದೊಡ್ಡ ಸ್ಟೇಡಿಯಂ ಎಂಬ ಕೀರ್ತಿಗೆ ಭಾಜನವಾಗಲಿದ್ದು, ಸ್ಟೇಡಿಯಂನಲ್ಲಿ ಎಲ್ಲ ಅಂತಾರಾಷ್ಟ್ರೀಯ ದರ್ಜೆಯ ವ್ಯವಸ್ಥೆಗಳು ಲಭ್ಯವಿರುತ್ತದೆ ಎಂದು ಜಿಸಿಎ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಗುಜರಾತ್ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷ ಪರಿಮಲ್ ನಥ್ವಾನಿ ಅಹ್ಮದಾಬಾದ್‌ನಲ್ಲಿ ಗುರುವಾರ ಸ್ವೀಕೃತ ಪತ್ರವನ್ನು ನಿರ್ಮಾಣ ಕಂಪೆನಿ ಎಲ್ ಆ್ಯಂಡ್ ಟಿ ನಿರ್ದೇಶಕ ಎಂವಿ ಸತೀಶ್‌ಗೆ ಹಸ್ತಾಂತರಿಸಿದ್ದಾರೆ.

ಮೊಟೆರಾ ಸ್ಟೇಡಿಯಂ 1983ರಲ್ಲಿ ಮೊದಲ ಬಾರಿ ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವಿನ ಟೆಸ್ಟ್ ಪಂದ್ಯದ ಆತಿಥ್ಯವಹಿಸಿತ್ತು. ಈ ಸ್ಟೇಡಿಯಂನಲ್ಲಿ ಒಟ್ಟು 12 ಟೆಸ್ಟ್ ಪಂದ್ಯಗಳು, 24 ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ ಏಕೈಕ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯ ನಡೆದಿದೆ. 2014ರಲ್ಲಿ ಕೊನೆಯ ಬಾರಿ ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಪಂದ್ಯದ ಆತಿಥ್ಯವಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News