ಜಾತಿ, ಧರ್ಮದ ಹೆಸರಿನಲ್ಲಿ ವಿಭಜಿಸಿ ಮತ ಪಡೆಯುವ ತಂತ್ರ ಬಿಜೆಪಿಗರದ್ದು : ಸಚಿವ ಕೃಷ್ಣಪ್ಪ

Update: 2016-12-10 15:00 GMT

ಪುತ್ತೂರು,ಡಿ.10: ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಿ ಮತ ಪಡೆಯುವ ತಂತ್ರ ಮಾಡುತ್ತಿರುವ ಬಿಜೆಪಿಗರು ಕಾಂಗ್ರೆಸ್ ಪಕ್ಷದವರು ಮಾಡಿದ ಕೆಲಸಕ್ಕೆ ಪ್ರಚಾರ ತೆಗೆದುಕೊಳ್ಳುವ ಗೀಳು ಅವರದ್ದಾಗಿದೆ. ಆದರೆ ಕಾಂಗ್ರೆಸ್ ಅಖಂಡ ಭಾರತದ ಸಮಗ್ರತೆ ಮತ್ತು ಜಾತ್ಯತೀತತೆಯನ್ನು ಎತ್ತಿ ಹಿಡಿಯುವ ಸಿದ್ದಾಂತ ಹೊಂದಿದೆ ಎಂದು ರಾಜ್ಯ ವಸತಿ ಖಾತೆ ಸಚಿವ ಕೃಷ್ಣಪ್ಪ ಹೇಳಿದರು. ಅವರು ಶನಿವಾರ ಸಂಜೆ ಪುತ್ತೂರಿನ ಸಾಲ್ಮರ ಕೋಟೆಚಾ ಹಾಲ್‌ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಬ್ಲಾಕ್ ಸಮಿತಿ ವತಿಯಿಂದ ಹಮ್ಮಿಕೊಂಡ ‘ಕಾಂಗ್ರೆಸ್ ನಡಿಗೆ ಸುರಾಜ್ಯದ ಕಡೆಗೆ’ ಕಾರ್ಯಾಗಾರ, ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಮನೆಯಿಲ್ಲದವರಿಗೆ 9 ಲಕ್ಷ ಮನೆ ನೀಡಲಾಗಿದೆ. ಇನ್ನೂ ಆರು ಲಕ್ಷ ಮನೆ ನಿರ್ಮಿಸುವ ಗುರಿ ಹೊಂದಲಾಗಿದೆ. ಮನೆ ಇಲ್ಲದವರಿಗೆ ಸೂರು ಒದಗಿಸಲು ಸರಕಾರ ಕಟಿಬದ್ಧವಾಗಿದೆ ಎಂದ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಮಂಜೂರು ಮಾಡಲಾಗುವುದು. ಇತರ ಸಮುದಾಯಗಳಿಗೆ ಬಸವ ವಸತಿ ಯೋಜನೆಯಲ್ಲಿ ಮನೆ ನೀಡುವ ಹೊಣೆಯನ್ನು ಆಯಾ ಕ್ಷೇತ್ರದ ಶಾಸಕರಿಗೆ ನೀಡಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಕಾಂಗ್ರೆಸ್ ಪಕ್ಷ ಎಂದಿಗೂ ಬಡಜನರಿಗೆ ಮೋಸ ಮಾಡಿಲ್ಲ ಕಳೆದ 60 ವರ್ಷಗಳಲ್ಲಿ ನೂರಾರು ಯೋಜನೆಗಳನ್ನು ಬಡವರಿಗಾಗಿ ಜಾರಿಗೊಳಿಸಿದೆ.  ಇಂದಿರಾ ಗಾಂಧಿ ಬಡವರನ್ನು ಬ್ಯಾಂಕ್ ಪ್ರವೇಶಿಸುವಂತೆ ಮಾಡಿದರೆ ಇವತ್ತು ಮೋದಿ ಬಡವರನ್ನು ಬ್ಯಾಂಕಿನಿಂದ ಹೊರದಬ್ಬಿ ಬೀದಿ ಪಾಲು ಮಾಡಿದ್ದಾರೆ. ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಹಾಕ್ತೀನಿ ಎಂದು ಹೇಳಿದ ಮೋದಿ, ಈಗ ಅದು ಆಗುವುದಿಲ್ಲ ಎಂದು ಗೊತ್ತಾದ ಮೇಲೆ ದೇಶದ ಜನರ ಮೇಲೆಯೇ ನೋಟು ನಿಷೇಧದ ಬರೆ ಎಳೆದು ಸಂಕಟಕ್ಕೆ ದೂಡಿದ್ದಾರೆ ರಾಜ್ಯದಲ್ಲಿ ಎತ್ತಿನ ಹೊಳೆ ಯೋಜನೆ ಜಾರಿಗೊಳಿಸಿದ ಬಿಜೆಪಿಗರೇ ಇದೀಗ ಅದನ್ನು ವಿರೋಧಿಸಿ ಯಾತ್ರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕಾಗಿ ಒಂದಿಷ್ಟು ಸಮಯವನ್ನು ಮೀಸಲಿಡಬೇಕು. ಬಿಜೆಪಿ ಅವರು ಮಾಡುವ ಅಪಪ್ರಚಾರ, ಸುಳ್ಳುಗಳನ್ನು ಒಂದೊಂದಾಗಿ ಬಯಲಿಗೆಳೆದು ಜನರ ಮುಂದಿಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ವಿ.ಆರ್. ಸುದರ್ಶನ್, ಪಕ್ಷದ ಮುಖಂಡರಾದ ನವೀನ್ ಭಂಡಾರಿ, ಟಿ.ಎಂ. ಶಹೀದ್, ಎಂ.ಎಸ್. ಸುದರ್ಶನ್, ಅಬ್ಬಾಸ್ ಆಲಿ, ಫಝಲ್ ರಹೀಂ, ಪ್ರವೀಣ್ ಚಂದ್ರ ಆಳ್ವ, ಸೂತ್ರಬೆಟ್ಟು ಜಗನ್ನಾಥ ರೈ, ವಿಶಾಲಾಕ್ಷಿ, ಮಹೇಶ್ ರೈ ಅಂಕೊತ್ತಿಮಾರ್, ರಾಮಚಂದ್ರ ಅಮಳ, ಅಬ್ಬಾಸ್ ಆಲಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News