×
Ad

ಕೊಲೆಗೆ ಯತ್ನ ಪ್ರಕರಣ : ಆರೋಪಿಗಳ ಬಂಧನ

Update: 2016-12-10 22:39 IST

ಮಂಗಳೂರು, ಡಿ.10: ನಗರದ ನೆಲ್ಲಕಾಯಿ ರಸ್ತೆಯ ಅಪಾರ್ಟ್‌ಮೆಂಟ್‌ವೊಂದರ ಪಾರ್ಕಿಂಗ್ ಸ್ಥಳದಲ್ಲಿ ಯುವಕನೋರ್ವನನ್ನು ಕೊಲೆಗೆ ಯತ್ನ ಪ್ರಕರಣದ ಮೂವರು ಆರೋಪಿಗಳನ್ನು ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಬಂಧಿಸಿದ್ದಾರೆ.

 ನಡುಪಳ್ಳಿ ಮಸೀದಿ ಬಳಿಯ ನಿವಾಸಿ ಅಮ್ಮದ್‌ಸಿನಾನ್ ಜಲೀಲ್ ಚಿನ್ನ ಶಿನಾನ್ (22), ಕುದ್ರೋಳಿಯ ಶೇಖ್ ಶಹಬಾಝ್ ಚಾಬಾ (22), ಕುದ್ರೋಳಿಯ ಅನೀಸ್ ಅಶ್ರಫ್ (19) ಎಂವಬವರೇ ಬಂಧಿತ ಆರೋಪಿಗಳು.

      ಆರೋಪಿಗಳು ಡಿಸೆಂಬರ್ 2ರಂದು ರಾತ್ರಿ ಸುಮಾರು 10:45ಕ್ಕೆ ನೆಲ್ಲಿಕಾಯಿ ರಸ್ತೆ ಬಳಿಯ ನಿವಾಸಿ ಮುಹಮ್ಮದ್ ಇಜಾಝ್ (26) ರವರು ತನ್ನ ಆಕ್ಟೀವಾ ಸ್ಕೂಟರ್‌ನಲ್ಲಿ ತಮ್ಮ ಅಪಾರ್ಟ್‌ಮೆಂಟ್ ಗೆ ಬಂದು ಸ್ಕೂಟರನ್ನು ಪಾರ್ಕ್ ಮಾಡಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಹಿಂದಿನಿಂದ ಬಂದು ತಲವಾರುಗಳಿಂದ ಕಡಿದಾಗ ಮುಹಮ್ಮದ್ ಇಜಾಝ್ ಜೀವ ಭಯದಿಂದ ಓಡಿದ್ದರು. ಆರೋಪಿಗಳು ಅವರನ್ನು ಬೆನ್ನಟ್ಟಿಕೊಂಡು ಹೋಗಿ ಅಪಾರ್ಟ್‌ಮೆಂಟ್‌ನ ಮೆಟ್ಟಿಲ ಬಳಿ ತಲವಾರುಗಳಿಂದ ತಲೆಗೆ ಕಡಿದು, ಚೂರಿಯಿಂದ ಬೆನ್ನಿಗೆ ಇರಿದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.

       ಡಿ. 9ರಂದು ಬೆಳಗ್ಗೆ 7:10ಕ್ಕೆ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಆರೋಪಿಗಳನ್ನು ಸುರತ್ಕಲ್ ಜಂಕ್ಷನ್ ಬಳಿಯಿಂದ ದಸ್ತಗಿರಿ ಮಾಡಿದ್ದಾರೆ. ಅವರಿಂದ ಕೃತ್ಯಕ್ಕೆ ಉಪಯೋಗಿಸಿದ ಆ್ಯಕ್ಟೀವಾ ಸ್ಕೂಟರ್, ತಲವಾರು ಹಾಗೂ ಚೂರಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಕೃತ್ಯ ನಡೆಸಿದ ಬಳಿಕ ಆರೋಪಿಗಳು ಗೋವಾಕ್ಕೆ ಪರಾರಿಯಾಗಿದ್ದರು. ಗೋವಾದಿಂದ ವಾಪಾಸ್ಸು ಮಂಗಳೂರಿಗೆ ಬರುತ್ತಿರುವ ಸಮಯ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ಸುರತ್ಕಲ್ ಜಂಕ್ಷನ್ ಬಳಿ ದಸ್ತಗಿರಿ ಮಾಡಲಾಗಿದೆ. ಈ ಹಿಂದೆ ಬಂದರು ಬಳಿ ಗಾಯಾಳು ಮುಹಮ್ಮದ್ ಇಜಾಝ್ ಹಾಗೂ ಆರೋಪಿಗಳ ನಡುವೆ ನಡೆದ ಗಲಾಟೆಯ ದ್ವೇಷದಿಂದ ಆರೋಪಿಗಳು ಕೃತ್ಯ ನಡೆಸಿರುವುದೆಂದು ತನಿಖಾ ಸಮಯ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಇತರ ಆರೋಪಿಗಳಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

  ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಬೆಳ್ಳಿಯಪ್ಪ ಕೆ.ಯು. ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅನಂತ ಮುರ್ಡೇಶ್ವರ ಅವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಬ್ಬಂದಿಗಳು ಆರೋಪಿ ಪತ್ತೆಗೆ ಸಹಕರಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News