×
Ad

ಭಗವಂತನಿಗೆ ಸಾವಿರ ರೂಪಗಳಾದರೂ ಹೃದಯವೊಂದೇ: ಪೇಜಾವರಶ್ರೀ

Update: 2016-12-10 23:01 IST

ಉಡುಪಿ, ಡಿ.10: ಭೂಮಿಯನ್ನು ತಾಯಿ, ಭಗವಂತನನ್ನೇ ತಂದೆ ಎಂದು ವೇದಗಳು ವರ್ಣಿಸಿವೆ. ಭಗವಂತನಿಗೆ ಸಾವಿರ ತಲೆ, ಸಾವಿರ ಕೈ, ಸಾವಿರ ಕಾಲುಗಳಿದ್ದರೂ ಹೃದಯ ಒಂದೇ. ಅದೇ ರೀತಿ ನಾಡಿನಲ್ಲಿ ಸಂಪ್ರದಾಯ, ಭಾಷೆ, ಪ್ರಾದೇಶಿಕತೆಯಲ್ಲಿ ವ್ಯತ್ಯಾಸಗಳಿದ್ದರೂ ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಎಂದು ಪರ್ಯಾಯ ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

 ಬೆಂಗಳೂರಿನ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಟ್ರಸ್ಟ್ ಹಾಗೂ ಸಿದ್ಧ ಸಮಾಧಿ ಯೋಗ(ಎಸ್‌ಎಸ್‌ವೈ) ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಿದ ಮೂರು ದಿನಗಳ ವಿಶ್ವ ಹೃದಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಸಮಾಜದಲ್ಲಿ ಭಿನ್ನ ಸಂಪ್ರದಾಯಗಳಿದ್ದರೂ ಒಂದೇ ಹೃದಯದ ಭಾವನಾತ್ಮಕ ಸಂಬಂಧದೊಂದಿಗೆ ಮಾನವ ಕುಲ ಬಾಳಲು ಸಮ್ಮೇಳನ ಸಹಕಾರಿಯಾಗಲಿ ಎಂದು ಹಾರೈಸಿದರು.

 ಸಮ್ಮೇಳನವನ್ನು ಉದ್ಘಾಟಿಸಿದ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಮಾತನಾಡಿ, ಭಗವಂತ ಹೃದಯದಲ್ಲಿರುವ ಕಾರಣ ಇದು ಮೂಲ ಸ್ಥಾನ. ಆದರೆ ನಾವೀಗ ದ್ವೇಷ, ಭೇದಭಾವ, ಯುದ್ಧ ಹೀಗೆ ಅನೇಕ ಪ್ರತಿಬಂಧಕಗಳೊಂದಿಗೆ ಬದುಕು ಸಾಗಿಸಿ ಹೃದಯಕ್ಕಿಂತ ಬುದ್ಧಿಗೆ ಹೆಚ್ಚು ಪ್ರಾಶಸ್ತ್ಯ ನೀಡುತಿದ್ದೇವೆ. ಇದರ ಬದಲು ಹೃದಯವಾಣಿಗೆ, ಹೃದಯ ಸಂಬಂಧ ಬೆಸೆಯುವ ಸೇತುವೆ ನಿರ್ಮಾಣಕ್ಕೆ ಮಹತ್ವ ಕೊಡಬೇಕಾಗಿದೆ ಎಂದರು.

 ಶ್ರೀಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಚಳ್ಳಕೆರೆಯ ಶ್ರೀಸತ್‌ಉಪಾಸಿ ಅಪ್ಪಾಜಿ, ಹೊಸದುರ್ಗದ ಶ್ರೀಕಾಂತಾನಂದ ಸರಸ್ವತಿ ಸ್ವಾಮೀಜಿ, ಹಾಸನ ಮಲ್ಲಪ್ಪನಹಳ್ಳಿ ಪ್ರವೀಣ್ ಗುರೂಜಿ, ಶಿವಮೊಗ್ಗದ ಶ್ರೀಬ್ರಹ್ಮಾನಂದತೀರ್ಥ ಭಿಕ್ಷು, ರಾಜರಾಜೇಶ್ವರ ಸಂಸ್ಥಾನದ ಶ್ರೀವಿಶ್ವಾಧಿರಾಜ ತೀರ್ಥ ಸ್ವಾಮೀಜಿ, ಶಿವಮೊಗ್ಗದ ವಿಶ್ವನಾಥ ಶಾಸ್ತ್ರಿ, ಉಚ್ಚಿಂಗಿಯ ಚಿತ್‌ಸ್ವರೂಪ ಜ್ಞಾನಿ ಪ್ರಸನ್ನಗುರೂಜಿ, ಮೈಸೂರಿನ ಸಾಯಿ ಅರ್ಜುನ್ ಗುರೂಜಿ, ಹಿರಿಯೂರಿನ ಸುಭೋದಾನಂದರು, ಬೆಂಗಳೂರಿನ ಶ್ರೀಕಂಠ ಗುರೂಜಿ, ಗುರುಮಾತಾ ರಮಾದೇವಿ ಅಮ್ಮ, ಅರುಂಧತಿ ಋಷಿಪ್ರಭಾಕರ್, ಸಿದ್ಧಾಂತ ಋಷಿ ಪ್ರಭಾಕರ್, ಚೈತನ್ಯ ಕಾಯ್ಕಿಣಿ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್‌ಎಸ್‌ವೈ ಉಡುಪಿ ಘಟಕದ ಡಾ.ಯು.ಪಿ.ಉಪಾಧ್ಯಾಯ, ಪ.ವಸಂತ ಭಟ್ ಮೊದಲಾದವರು ಉಪಸ್ಥಿತರಿದ್ದರು.

ವಲಯ ಮುಖ್ಯಸ್ಥ ಎಚ್.ಎಸ್.ರಮೇಶಚಂದ್ರ ಸ್ಲಾಗತಿಸಿ, ಸತೀಶ್ ಮಂಜ ಪ್ರಸ್ತಾವನೆಗೈದರು. ಕುಂದಾಪುರದ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News