ಜ.18ರಿಂದ ಐಸಿವೈಎಂನಿಂದ ರಾಷ್ಟ್ರೀಯ ಯುವ ಸಮ್ಮೇಳನ
ಮಂಗಳೂರು, ಡಿ.10: ಭಾರತೀಯ ಕೆಥೊಲಿಕ್ ಯುವ ಸಂಚಾಲನವು 70ನೆ ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಐಸಿವೈಎಂ ಮಂಗಳೂರು ಧರ್ಮಪ್ರಾಂತದ ವತಿಯಿಂದ 10ನೆ ರಾಷ್ಟ್ರೀಯ ಯುವ ಸಮ್ಮೇಳನ ಜ.18ರಿಂದ 22ರವರೆಗೆ ವಾಮಂಜೂರು ಸಂತ ಜೋಸೆಫ್ ತಾಂತ್ರಿಕ ಮಹಾವಿದ್ಯಾಲಯದ ವಠಾರದಲ್ಲಿ ನಡೆಯಲಿದೆ ಎಂದು ಭಾರತೀಯ ಕೆಥೊಲಿಕ್ ಯುವ ಸಂಚಾಲನದ ನಿರ್ದೇಶಕ ರೆ.ಫಾ. ರೊನಾಲ್ಡ್ ಪ್ರಕಾಶ್ ಡಿಸೋಜ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಷ್ಟ್ರಮಟ್ಟದ ಯುವ ನಾಯಕರು, ಯುವ ನಿರ್ದೇಶಕರು, ಯುವ ತರಬೇತುದಾರರನ್ನು ಒಗ್ಗೂಡಿಸುವುದು ಈ ಸಮ್ಮೇಳನದ ಗುರಿಯಾಗಿದೆ 'Touched by Jesus; walking His way’ ಸಮ್ಮೇಳನದ ಧ್ಯೇಯ ವಾಕ್ಯವಾಗಿದೆ. 3 ವರ್ಷಕ್ಕೊಮ್ಮೆ ನಡೆಯುವ ಈ ಸಮ್ಮೇಳನ ಮೊದಲ ಬಾರಿಗೆ ಮಂಗಳೂರಿನಲ್ಲಿ ಜರಗಲಿದೆ ಎಂದು ಅವರು ವಿವರಿಸಿದರು.
ಜ.22ರಂದು ‘ಪೀಸ್ ರ್ಯಾಲಿ’ ನಡೆಯಲಿದೆ. ಸಮ್ಮೇಳನದ ಅಂಗವಾಗಿ ಜ.14ರಿಂದ 17ರವರೆಗೆ ರಾಜ್ಯಾದ್ಯಂತ ಧರ್ಮಪ್ರಾಂತದ ಹಲವು ಚರ್ಚ್‌ಗಳಲ್ಲಿ ಯುವ ನಾಯಕರಿಗೆ ಕುಟುಂಬಗಳು ವಾಸ್ತವ್ಯ ಹೂಡಿ, ಸ್ಥಳೀಯ ಆಚಾರ ವಿಚಾರ, ಸಂಸ್ಕೃತಿ, ಜೀವನ ಶೈಲಿಯ ಅನುಭವ ನೀಡುವ ‘ಡೈಸ್ ಇನ್ ಡೈಯಸಿಸ್’ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. 10ನೆ ರಾಷ್ಟ್ರೀಯ ಸಮ್ಮೇಳನದ ಪೂರ್ವಭಾವಿಯಾಗಿ ಪವಿತ್ರ ಶಿಲುಬೆಯ ಪಯಣವು ಡಿ.11ರಂದು ಅಪರಾಹ್ನ 3:30ಕ್ಕೆ ಮಂಗಳೂರಿಗೆ ಆಗಮಿಸಲಿದೆೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾರತೀಯ ಕೆಥೊಲಿಕ್ ಯುವ ಸಂಚಾಲನದ ಅಧ್ಯಕ್ಷ ಜಾಕ್ಸನ್ ಎರಿಕ್ ಡಿಕೋಸ್ತ, ಆಲ್ವಿನ್ ಡಿಸೋಜ, ಜೋಯೆಲ್ ಕೊನ್ಸೆಸೊ, ಇ. ಫೆರ್ನಾಂಡಿಸ್ ಉಪಸ್ಥಿತರಿದ್ದರು.