ನೋಟು ನಿಷೇಧದಿಂದ ಒಳ್ಳೆಯದಾಗಲಿದೆ: ಡಿವಿ

Update: 2016-12-10 18:17 GMT

ಉಪ್ಪಿನಂಗಡಿ, ಡಿ.10: ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1000 ರೂ. ಹಳೆಯ ನೋಟು ಅಮಾನ್ಯಗೊಳಿಸಿರುವುದು ಕಪ್ಪು ಹಣದ ನಿರ್ಮೂಲನೆಗಾಗಿ ಹಾಗೂ ದೇಶದ ಉಳಿವಿಗಾಗಿ. ಮೋದಿಯವರ ಈ ಕ್ರಮವನ್ನು ದೇಶದ ಜನತೆ ಒಪ್ಪಿಕೊಂಡಿದ್ದು, ಇದು ಪಕ್ಷಕ್ಕೆ ಧನಾತ್ಮಕವಾಗಲಿದೆ ಎಂದು ಕೇಂದ್ರ ಸಾಂಖಿಕ ಮತ್ತು ಯೋಜನಾ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು.

ಕಳೆದ ಕೆಲವು ತಿಂಗಳ ಹಿಂದೆ ನಿಧನರಾದ ಬಿಜೆಪಿ ಕಾರ್ಯಕರ್ತ ಶಾಂತಿತ್ತಡ್ಡದ ಮಾಧವ ಗೌಡರ ಮನೆಗೆ ಶನಿವಾರ ಭೇಟಿ ನೀಡಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

 ದೇಶದ ಶೇ.92 ಜನ ಮೋದಿಯವರ ಪರವಾಗಿದ್ದು, ರಾಷ್ಟ್ರದ ಹಿತಾಸಕ್ತಿ ಬಯಸದ ಕೆಲವೇ ಕೆಲವು ಜನ ಮಾತ್ರ ಇದನ್ನು ಟೀಕಿಸುತ್ತಿದ್ದಾರೆ. ಆದ್ದರಿಂದ ಮೋದಿಯವರ ಈ ನಿರ್ಧಾರವು ಪಕ್ಷಕ್ಕೆ ಋಣಾತ್ಮಕವಾಗಲು ಸಾಧ್ಯವೇ ಇಲ್ಲ ಎಂದರು.

ಕಂಬಳ ಆಚರಣೆ ಕುರಿತಂತೆ ಕಾನೂನಿನ ತೊಡಕಿನ ಸಾಧಕ -ಬಾಧಕಗಳ ಬಗ್ಗೆ ಪರಿಶೀಲಿಸಿ ಈ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

*ಎತ್ತಿನಹೊಳೆ ಬಗ್ಗೆ ಮಾತನಾಡಲ್ಲ: ಎತ್ತಿನಹೊಳೆ ಯೋಜನೆ ವಿರೋಧಿಸಿ ಜಿಲ್ಲೆಯಲ್ಲಿ ನಡೆಯುತ್ತಿರುವ ‘ಪಂಚತೀರ್ಥ ಸಪ್ತ ಕ್ಷೇತ್ರ ರಥ ಯಾತ್ರೆ’ಗೆ ಸಂಬಂಧಿಸಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವರು, ‘ನೋ ಕಮೆಂಟ್ಸ್’ ಎಂದು ನಕ್ಕುಬಿಟ್ಟರು.

 ರೈಲ್ವೆ ಮಂತ್ರಿಯಾಗಿದ್ದಾಗ 21 ಯೋಜನೆಗಳನ್ನು ಪ್ರಕಟಿಸಿದ್ದೇನೆ. ಆದರೆ ಅದರಲ್ಲಿ ನನ್ನ ಬಹುಕನಸಿನ ಯೋಜನೆಯಾದ ಶ್ರವಣಬೆಳಗೊಳ- ಮಂಗಳೂರು ಹಗಲು ರೈಲು ಓಡಾಟದ ಯೋಜನೆಯು ಸಕಲೇಶಪುರ ಘಾಟಿ ಪ್ರದೇಶದಲ್ಲಿ ತಾಂತ್ರಿಕ ತೊಂದರೆ ಎದುರಾಗಿರುವುದರಿಂದ ಅರ್ಧದಲ್ಲೇ ನಿಂತಿದೆ. ಈ ಬಗ್ಗೆ ಈಗಿನ ರೈಲ್ವೆ ಮಂತ್ರಿಗಳಲ್ಲಿ ನಾನು ಮಾತನಾಡಿದ್ದು, ಕಾಮಗಾರಿಗೆ ಎದುರಾಗಿರುವ ತೊಂದರೆಯನ್ನು ನೀಗಿಸಿ, 10 ದಿನಗಳೊಳಗೆ ಕಾಮಗಾರಿಗೆ ಆದೇಶ ನೀಡಬೇಕೆಂದು ಮನವಿ ಮಾಡಿದ್ದೇನೆ ಎಂದರು.

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ರೈ ಕೋಡಿಂಬಾಡಿ, ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News