ಮಾನವ ಹಕ್ಕುಗಳ ಉಲ್ಲಂಘನೆ ತನಿಖೆಗೆ ಸ್ವತಂತ್ರ ವ್ಯವಸ್ಥೆ ಅಗತ್ಯ: ಉಳೆಪಾಡಿ

Update: 2016-12-10 18:20 GMT

ಮಂಗಳೂರು, ಡಿ.10: ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ನ್ಯಾಯ ದೊರೆಯಬೇಕಾದರೆ ಈಗ ಇರುವ ವ್ಯವಸ್ಥೆಗಿಂತ ಭಿನ್ನವಾದ ಪ್ರಕರಣ ದಾಖಲಿಸುವ, ತನಿಖೆ ಹಾಗೂ ವಿಚಾರಣೆ ನಡೆಸುವ ವ್ಯವಸ್ಥೆಯಾಗಬೇಕು ಎಂದು ನ್ಯಾಯವಾದಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ದಿನೇಶ್ ಹೆಗ್ಡೆ ಉಳೆಪಾಡಿ ಅಭಿಪ್ರಾಯಿಸಿದ್ದಾರೆ.

ದ.ಕ. ಜಿಲ್ಲಾ ಪಿಯುಸಿಎಲ್ ವತಿಯಿಂದ ನಗರದ ಸಹೋದಯ ಸಭಾಂಗಣದಲ್ಲಿ ಹಮ್ಮಿಕೊಂಡ ಮಾನವ ಹಕ್ಕು ದಿನದ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಪ್ರಸಕ್ತ ಇರುವ ವ್ಯವಸ್ಥೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದರೆ ಪೊಲೀಸರ ಮೂಲಕ ದೂರು ದಾಖಲಾಗಿ ತನಿಖೆ ನಡೆದು ನ್ಯಾಯಾಲಯದಲ್ಲಿ ವಿಚಾರಣೆಯಾಗುತ್ತದೆ. ಆದರೆ ಈ ಅವಧಿಯಲ್ಲಿ ದೂರುದಾರನ ಘನತೆಗೆ ಧಕ್ಕೆಯಾಗುವ ರೀತಿಯ ವರ್ತನೆಗಳು ಪೊಲೀಸರಿಂದ ನಡೆಯುತ್ತದೆ. ಹಲವು ಬಾರಿ ಪೊಲೀಸರು ಆರೋಪಿಯನ್ನು ಅಕ್ರಮವಾಗಿ ಬಂಧಿಸಿ ಸಾಕಷ್ಟು ದಿನಗಳ ನಂತರ ಹಾಜರು ಪಡಿಸುವುದೂ ಇದೆ. ಇದರಿಂದ ಮಾನವ ಹಕ್ಕುಗಳ ರಕ್ಷಣೆ ಸಾಧ್ಯವಿಲ್ಲ ಎಂದರು.

 ಮಾನವ ಹಕ್ಕುಗಳ ರಕ್ಷಣೆಯಾಗಬೇಕಾದರೆ ಮಕ್ಕಳ ಹಕ್ಕುಗಳ ರಕ್ಷಣೆಗೆ ಇರುವ ರೀತಿಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸುವ, ತನಿಖೆ ನಡೆಸುವ ವ್ಯವಸ್ಥೆ ಆಗಬೇಕು. ಅದೇ ರೀತಿ ನ್ಯಾಯಾಲಯದಲ್ಲೂ ಈ ಬಗ್ಗೆ ಹೆಚ್ಚಿನ ತಿಳುವಳಿಕೆ ಹೊಂದಿರುವ ನ್ಯಾಯಾಧೀಶರು ಮತ್ತು ಮಾನವ ಹಕ್ಕುಗಳ ಮಾಹಿತಿ ಹೊಂದಿರುವ ನ್ಯಾಯವಾದಿಗಳ ಅಗತ್ಯವಿದೆ ಎಂದು ಅವರು ಹೇಳಿದರು.

ಪಿಯುಸಿಎಲ್‌ನ ರಾಷ್ಟ್ರೀಯ ಘಟಕದ ಉಪಾಧ್ಯಕ್ಷ ಪಿ.ಬಿ.ಡೇಸಾ ಮಾತನಾಡಿ, ದೇಶದಲ್ಲಿ ಮಾನವಹಕ್ಕುಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ನೀಡುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News