×
Ad

ಕವಿ, ಪತ್ರಕರ್ತ, ಫೋಟೋಗ್ರಾಫರ್ ಅಹ್ಮದ್ ಅನ್ವರ್ ನಿಧನ

Update: 2016-12-11 08:49 IST

ಮಂಗಳೂರು, ಡಿ.11: ಕವಿ, ಪತ್ರಕರ್ತ ಅಹ್ಮದ್ ಅನ್ವರ್(55) ರವಿವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಮೂಲತಃ ಬೆಂಗರೆಯ ಪ್ರಸ್ತುತ ಮಂಗಳೂರಿನ ಬಲ್ಮಠದಲ್ಲಿ ನೆಲೆಸಿರುವ ಅಹ್ಮದ್ ಅನ್ವರ್ ಕಳೆದ ನಾಲ್ಕೈದು ವರ್ಷದಿಂದ ಅಸೌಖ್ಯದಿಂದಿದ್ದರು. ಇಂದು ಮುಂಜಾನೆ ತೀವ್ರ ಅಸ್ವಸ್ಥಗೊಂಡು ಕೊನೆಯುಸಿರೆಳೆದಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೃತದೇಹವನ್ನು ಇದೀಗ ಬೋಳಾರದಲ್ಲಿರುವ ತನ್ನ ತಂದೆಯ ಮನೆಯಲ್ಲಿ ಅಂತಿಮ ದರ್ಶನಕ್ಕಿಡಲಾಗಿದೆ. ಮೃತರ ಅಂತ್ಯಸಂಸ್ಕಾರ ರವಿವಾರ ಅಪರಾಹ್ನ ನಡೆಯಲಿರುವುದಾಗಿ ಅವರ ಕುಟುಂಬ ಮೂಲಗಳು ತಿಳಿಸಿವೆ.

ಕವಿ ಹೃದಯದ ಅಹ್ಮದ್ ಅನ್ವರ್ ಅವರು ಜವಳಿ ವ್ಯಾಪಾರಿಯಾಗಿ ವೃತ್ತಿ ಆರಂಭಿಸಿದ್ದರು. ಆ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಕರ್ಷಿತರಾಗಿ, ಫೋಟೋಗ್ರಾಫರಾಗಿ ಗಮನ ಸೆಳೆದಿದ್ದರು. ಕತೆ, ಕವನ ,ಲೇಖನ ನಿರಂತರವಾಗಿ ಬರೆಯುತ್ತಿದ್ದರು. ಅಹ್ಮದ್ ಅನ್ವರ್ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದರು.

ಕನ್ನಡ, ಉರ್ದು, ಬ್ಯಾರಿ ಭಾಷೆಗಳಲ್ಲಿ ಹಿಡಿತ ಸಾದಿಸಿದ್ದ ಅಹ್ಮದ್ ಅನ್ವರ್ ಭಾರತಗೀತಾ, ಗುಲ್ಮೊಹರ್, ನನ್ನ ಕನಸಿನ ಭಾರತ, ಬೇವು ಬೆಲ್ಲ, ಇತ್ಯಾದಿ ಕೃತಿಗಳನ್ನು ರಚಿಸಿದ್ದರು.

ಇವರಿಗೆ ಮುಸ್ಲಿಂ ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನದಿಂದ ಅತ್ತಿಮಬ್ಬೆ ಪ್ರಶಸ್ತಿ, ಸ್ನೇಹಸೇತು ಪ್ರಶಸ್ತಿ ಲಭಿಸಿತು.
ಮಂಗಳೂರಿನ ಸಹೃದಯಿ ಗೆಳೆಯರು ಇತ್ತೀಗಷ್ಟೆ ರಚಿಸಿದ್ದ 'ಬಿಳಿಚುಕ್ಕೆ' ಪ್ರಕಾಶನವು ಇವರ ಕವನ ಸಂಕಲನ 'ಪಯನಿಗಳನ ಪದ್ಯಗಳು' ಕೃತಿಯನ್ನು ಪ್ರಕಟಿಸಿತ್ತು. ಅದನ್ನು ಬಿಡುಗಡೆಗೊಳಿಸಲು ಎಲ್ಲಾ ರೀತಿಯ ಸಿದ್ದತೆ ನಡೆಸಿದ್ದರು. ಡಿ.23ರ ಶುಕ್ರವಾರ ಮಂಗಳೂರಿನ ಪುರಭವನದಲ್ಲಿ ಈ ಕೃತಿ ಬಿಡುಗಡೆಗೊಳಿಸಲಿತ್ತು, ಖ್ಯಾತ ಲೇಖಕಿ ವೈದೇಹಿ ಮುನ್ನುಡಿ ಬರೆದಿದ್ದಾರೆ.

ಅನಾರೋಗ್ಯದಲ್ಲಿರುವಾಲೇ ತನ್ನ ಫೋಟೋಗಳ ಪ್ರದರ್ಶನವನ್ನು ಮಂಗಳೂರಿನಲ್ಲಿ ಏರ್ಪಡಿಸಿದ್ದರು. ಅವರ ಕವನ ಸಂಕಲನ ಬಿಡುಗಡೆ ಬಳಿಕ ತನ್ನ ಎಲ್ಲಾ ಫೋಟೋಗಳ ಪ್ರದರ್ಶನವನ್ನು ಮತ್ತೊಮ್ಮೆ ಆಯೋಜಿಸಲು ಆಶಿಸಿದ್ದರು.

ಸಂತಾಪ: ಅಹ್ಮದ್ ಅನ್ವರ್ ನಿಧನಕ್ಕೆ ಸಚಿವ ಯು.ಟಿ ಖಾದರ್, ಬ್ಯಾರಿ ಅಕಾಡಮಿ ಅಧ್ಯಕ್ಷ ಬಿ.ಎ ಮುಹಮ್ಮದ್ ಹನೀಫ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸ್ಥಾಪಕಾಧ್ಯಕ್ಷ ಅಬ್ದುರವೂಫ್ ಪುತ್ತಿಗೆ ಮತ್ತಿತರರು ತೀವ್ರ ಸಂತಾಪ ಸೂಚಿಸಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News