ಬ್ಯಾಂಕಿನಲ್ಲಿ ಹಣ ಸಿಗದ ವ್ಯಥೆ: ಮಾಜಿಸೈನಿಕ ಆತ್ಮಹತ್ಯೆ
ಆಗ್ರಾ, ಡಿ. 11: ನೋಟು ಅಮಾನ್ಯಗೊಳಿಸಿದ ಪರಿಣಾಮ ಹಣ ದೊರಕದ್ದರಿಂದ ಬೇಸತ್ತ ಮಾಜಿ ಸೈನಿಕ ರಾಕೇಶ್ ಚಂದ್(54) ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ.
ರಾಕೇಸ್ ಚಂದ್ ಸಿಆರ್‌ಪಿಎಫ್ ಜವಾನರಾಗಿ ಸೇವೆ ಸಲ್ಲಿಸಿದ್ದರು. 1990ರಲ್ಲಿ ಕಾಶ್ಮೀರದ ಬಾರಮುಲ್ಲದಲ್ಲಿ ನಡೆದ ಒಂದು ದಾಳಿಯಲ್ಲಿ ಗಾಯಗೊಂಡಿದ್ದರು. ದಾಳಿಯಲ್ಲಿ ಅವರ ಎದೆಗೆ ಐದು ಗುಂಡುಗಳು ಹೊಕ್ಕಿತ್ತು. ಆದ್ದರಿಂದ ಅವರು ಈಗಲೂ ಚಿಕಿತ್ಸೆ ಪಡೆಯುತ್ತಿದ್ದರು. ಬುಡಾನ ಎಂಬಲ್ಲಿನ ನಿವಾಸಿಯಾಗಿದ್ದ ಅವರು ತಾಜ್‌ಗಂಜ್‌ನ ಎಸ್‌ಬಿಐ ಬ್ರಾಂಚ್‌ಗೆ ಚಿಕಿತ್ಸೆಗೆ ಸಂಬಂಧಿಸಿ ಹಣ ಪಡೆಯಲು ಬ್ಯಾಂಕಿಗೆ ಬಂದಿದ್ದರು. ಕೆಲವು ಬಾರಿ ಬ್ಯಾಂಕ್‌ಗೆ ಬಂದರೂ ಹಣ ಪಡೆಯಲು ಅವರಿಂದ ಸಾಧ್ಯವಾಗಿರಲಿಲ್ಲ.
ಇದರಿಂದ ಬೇಸತ್ತ ಅವರು ತನ್ನ ಲೈಸೆನ್ಸ್ ಇರುವ ಬಂದೂಕಿನಿಂದ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆಗೆ ಹಣದ ಅತ್ಯಂತ ಅಗತ್ಯ ಇತ್ತು. ಅವರಿಗೆ ಕೇವಲ ಹದಿನೈದು ಸಾವಿರ ಮಾಸಿಕ ಪೆನ್ಶನ್ ಬರುತ್ತಿದೆ. ಅದರಲ್ಲಿ ಕೇವಲ 6000-7000ರೂಪಾಯಿ ಮದ್ದಿಗೆ ಖರ್ಚಾಗುತ್ತಿದೆ. ಈ ಎಲ್ಲ ಕಷ್ಟಗಳಿಂದಾಗಿ ಅವರು ಇಂತಹ ಕೃತ್ಯಕ್ಕೆ ಮುಂದಾಗಿದ್ದಾರೆಂದು ರಾಕೇಶ್‌ರ ಪುತ್ರ ಸುಶೀಲ್ ಕುಮಾರ್ ಹೇಳಿದ್ದಾರೆಂದು ವರದಿ ತಿಳಿಸಿದೆ.