ಜಮ್ಮು-ಕಾಶ್ಮೀರ ಸರಕಾರದ ವೆಬ್‌ಸೈಟ್‌ನಲ್ಲಿ ಇಬ್ಬರು ಕಾನೂನು ಸಚಿವರು.....!
ಶ್ರೀನಗರ,ಡಿ.11: ಜಮ್ಮು-ಕಾಶ್ಮೀರ ಸರಕಾರದಲ್ಲಿ ಕಾನೂನು ಮತ್ತು ನ್ಯಾಯ ಖಾತೆಯನ್ನು ಹೊಂದಿರುವ ಇಬ್ಬರು ಸಚಿವರಿದ್ದಾರೆ. ಇದು ರಾಜ್ಯ ಸರಕಾರದ ಸಾಮಾನ್ಯ ಆಡಳಿತ ಇಲಾಖೆಯ ವೆಬ್‌ಸೈಟ್ ನೀಡುತ್ತಿರುವ ಮಾಹಿತಿ!
ರಾಜ್ಯ ಸರಕಾರದ ಅಧಿಕೃತ ಟೆಲಿಫೋನ್ ಡೈರೆಕ್ಟರಿಯಲ್ಲಿ ಪಿಡಿಪಿ ನಾಯಕರಾದ ಅಬ್ದುಲ್ ಹಕ್ ಖಾನ್ ಮತ್ತು ಬಷಾರತ್ ಬುಖಾರಿ ಅವರು ಕಾನೂನು ಮತ್ತು ನ್ಯಾಯ ಖಾತೆಯನ್ನು ಹೊಂದಿದ್ದಾರೆಂದು ತೋರಿಸಲಾಗಿದೆ.
ವಾಸ್ತವದಲ್ಲಿ ಖಾನ್ ಹಾಲಿ ಕಾನೂನು ಮತ್ತು ನ್ಯಾಯ ಸಚಿವರಾಗಿದ್ದಾರೆ.
ಬುಖಾರಿ ಕಳೆದ ಜನವರಿಯಲ್ಲಿ ನಿಧನರಾಗಿರುವ ಮುಫ್ತಿ ಮೊಹಮ್ಮದ್ ಸಯೀದ್ ನೇತೃತ್ವದ ಪಿಡಿಪಿ-ಬಿಜೆಪಿ ಸರಕಾರದಲ್ಲಿ ಕಾನೂನು ಮತ್ತು ನ್ಯಾಯ ಸಚಿವರಾಗಿದ್ದರು.
ಮೆಹಬೂಬ ಮುಫ್ತಿ ನೇತೃತ್ವದ ಈಗಿನ ಸರಕಾರದಲ್ಲಿ ಹೆಚ್ಚಿನ ಸಚಿವರು ತಮ್ಮ ಹಿಂದಿನ ಖಾತೆಗಳನ್ನೇ ಉಳಿಸಿಕೊಂಡಿರುವರಾದರೂ ಬುಖಾರಿಯವರನ್ನು ಕಂದಾಯ ಸಚಿವ ರನ್ನಾಗಿ ಮಾಡಲಾಗಿದೆ ಮತ್ತು ಖಾನ್ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಜೊತೆಗೆ ಹೆಚ್ಚುವರಿಯಾಗಿ ಕಾನೂನು ಮತ್ತು ನ್ಯಾಯ ಖಾತೆಯನ್ನೂ ವಹಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ಕೋರಲು ಸುದಿಸಂಸ್ಥೆಗೆ ಸಾಮಾನ್ಯ ಆಡಳಿತ ಅಥವಾ ಕಾನೂನು ಇಲಾಖೆಯ ಯಾವುದೇ ಅಧಿಕಾರಿಗಳು ಲಭ್ಯವಾಗಿಲ್ಲ.