ಭಾರತದಲ್ಲಿ ಡಿಜಿಟಲ್ ಅರ್ಥ ವ್ಯವಸ್ಥೆ ಜಾರಿಯಾಗಲು ಸಾಕಷ್ಟು ಪ್ರಯತ್ನ ಅಗತ್ಯ : ದಿನೇಶ್ ಭಟ್

Update: 2016-12-11 12:17 GMT

ಪುತ್ತೂರು, ಡಿ. 11 :  ಪ್ರಸ್ತುತ ಭಾರತದಲ್ಲಿ ಆರ್ಥಿಕ ಸಾಕ್ಷರತೆ ತುಂಬಾ ಕಡಿಮೆ ಇರುವುದರಿಂದ ಡಿಜಿಟಲ್ ಅರ್ಥ ವ್ಯವಸ್ಥೆ ಜಾರಿಗೆ ಬರುವುದಕ್ಕೆ ಸಾಕಷ್ಟು ಪ್ರಯತ್ನ ಬೇಕಿದೆ ಎಂದು ಪುತ್ತೂರಿನ ಗ್ರಾಹಕ ವೇದಿಕೆ ಸದಸ್ಯ ದಿನೇಶ್ ಭಟ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ‘ನಗದು ಅಪಮೌಲ್ಯ, ಇ ಬ್ಯಾಂಕಿಂಗ್ ಹಾಗೂ ಡಿಜಿಟಲ್ ಬ್ಯಾಂಕಿಂಗ್’ ಬಗ್ಗೆ ಶನಿವಾರ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಕಪ್ಪು ಹಣವನ್ನು ನಿರ್ಮೂಲನೆ ಮಾಡುವಲ್ಲಿ ಅಪಮೌಲ್ಯೀಕರಣ ಜಾರಿಗೆ ಬಂದಿರುವುದು ಉತ್ತಮ. ಆದರೆ ದೇಶದ ಎಂಬತ್ತೈದು ಶೇಕಡಾ ಜನರು ಇನ್ನೂ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸುವುದನ್ನು ಅರಿತಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಕಾರ್ಡ್ ಬಳಸಿ ವ್ಯವಹಾರ ಸಾಗಿಸುವ ಹಿನ್ನಲೆಯಲ್ಲಿ ಅರಿವು ಮೂಡಿಸಬೇಕಿದೆ. ಈ ವಿಚಾರದಲ್ಲಿ ಸರ್ಕಾರದಿಂದ ಎಲ್ಲವನ್ನೂ ನಿರೀಕ್ಷಿಸದೆ ಸ್ಥಳೀಯ ಸಂಘ ಸಂಸ್ಥೆಗಳಿಂದ ಡಿಜಿಟಲ್ ಆರ್ಥಿಕತೆ ಮತ್ತು ಅದರ ಬಳಕೆಯ ಬಗ್ಗೆ ಮಾಹಿತಿ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಅರ್ಥಿಕ ಸಾಕ್ಷರತೆ ಮೂಡಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಭಾಗ ಮುಖ್ಯಸ್ಥೆ ವಿಜಯ ಸರಸ್ವತಿ ಮಾತನಾಡಿ ಬದಲಾವಣೆಗೆ ಒಗ್ಗಿಕೊಳ್ಳುವುದು ಅನಿವಾರ್ಯ. ಅದರಲ್ಲಿ ನಮ್ಮ ಜಾಣತನವೂ ಅಡಗಿದೆ. ಆದರೆ ನಾವು ಹೇಗೆ ನಮ್ಮನ್ನು ನಾವು ಬದಲಾವಣೆಗೆ ಒಗ್ಗಿಸಿಕೊಳ್ಳುತ್ತೇವೆ ಅನ್ನುವುದು ಮುಖ್ಯ. ಪ್ರಸ್ತುತ ಅಪಮೌಲ್ಯೀಕರಣದ ಹೊತ್ತಿನಲ್ಲಿ ಪ್ರತಿಯೊಬ್ಬ ಆರ್ಥಿಕ ಸಾಕ್ಷರರೂ ಉಳಿದವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News