×
Ad

ಕಾರ್ಮಿಕ ವರ್ಗ ಒಗ್ಗಟ್ಟಾಗಬೇಕಾದ ಅನಿವಾರ್ಯತೆ ಇದೆ: ಸುನೀಲ್ ಬಜಾಲ್

Update: 2016-12-11 17:52 IST

ಕೊಣಾಜೆ, ಡಿ. 11 : ಕೋಮುವಾದಿ ಹಾಗೂ ಭ್ರಷ್ಟ ಸರಕಾರಕ್ಕೆ ಬುದ್ದಿ ಕಲಿಸಬೇಕಾದರೆ ಕಾರ್ಮಿಕ ವರ್ಗ ಒಟ್ಟಾಗಿ ಸಮಾಜದಲ್ಲಿ ಸೌಹಾರ್ದಯುತ ಮೂಲಕ ಹೋರಾಟ ನಡೆಸಿ ಅಭಿವೃದ್ಧಿ ಸಮಾಜ ಕಟ್ಟಬೇಕಿದೆ ಎಂದು ಸಿ.ಐ.ಟಿ.ಯು. ರಾಜ್ಯ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಅವರು ಹೇಳಿದರು.

  ಅವರು ಭಾನುವಾರ ಅಸೈಗೋಳಿಯ ಲಯನ್ಸ್‌ಕ್ಲಬ್‌ನಲ್ಲಿ ನಡೆದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ರಾಜ್ಯ ಫೆಡರೇಶನ್ ಉಳ್ಳಾಲ ವಲಯ ಸಮಿತಿ(ಸಿಐಟಿಯು) ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಅದೆಷ್ಟೋ ಜನರಿಗೆ ಕಟ್ಟಡ, ಮನೆ ಕಟ್ಟಿಕೊಡುವ ಕಟ್ಟಡ ಕಾರ್ಮಿಕರಿಗೇ ಇಂದು ಸ್ವಂತ ಸೂರು ಇಲ್ಲದಂತಹ ಪರಿಸ್ಥಿತಿ ಇದೆ. ಜಗತ್ತಿಗೆ ಸಮಾಜಕ್ಕೆ ಒಂದು ಸುಂದರತೆಯನ್ನು ಒದಗಿಸಿಕೊಟ್ಟವರು ಕಟ್ಟಡ ಕಾರ್ಮಿಕರು. ಆದರೆ ಇಂದು ಕಟ್ಟಡ ಕಾರ್ಮಿಕರ ಸಮಸ್ಯೆಯನ್ನು ಆಲಿಸುವವರೇ ಇಲ್ಲದಂತಾಗಿದೆ. ಸರಕಾರದಿಂದ ಅವರಿಗೆ ಸಿಗಬೇಕಾದ ಸೌಲಭ್ಯಗಳು ಕೂಡಾ ಅವರಿಗೆ ನ್ಯಾಯಯುತವಾಗಿ ದೊರಕದೆ ದುರುಪಯೋಗವಾಗುತ್ತಿದ್ದಿದ್ದು,  ಈ ನಿಟ್ಟಿನಲ್ಲಿ ಕಾರ್ಮಿಕ ವರ್ಗ ತಮ್ಮ ನ್ಯಾಯಪರವಾದ ಹಕ್ಕುಗಳಿಗಾಗಿ ಹೋರಾಟ, ಚಳುವಳಿಗಳನ್ನು ನಡೆಸಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.

ಕಳೆದ ಮೂವತ್ತು ವರ್ಷದಿಂದ ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ದಿಗಾಗಿ ಸಿಐಟಿಯು ದೇಶದಲ್ಲಿ ಹೋರಾಟವನ್ನು ನಡೆಸುತ್ತಾ ಬಂದಿದೆ. 1996ರಲ್ಲಿ ಕಟ್ಟಡ ಕಾರ್ಮಿಕರಿಗಾಗಿ ಕಾನೂನು ರೂಪಿತವಾಗಿ 2006ರಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿಯು ಜಾರಿಗೆ ಬಂದಿದೆ. ಇಂದು ಕಾರ್ಮಿಕರ ಕಲ್ಯಾಣ ಇಲಾಖೆಯಲ್ಲಿ ಸುಮಾರು 4 ಸಾವಿರ ಕೋಟಿಯಷ್ಟು ಹಣ ಇದ್ದರೂ ಕೂಡಾ ಅದು ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ದಿಗಾಗಿ ಬಳಕೆಯಾಗುತ್ತಿಲ್ಲ. ಈ ದುರುಪಯೋಗವನ್ನು ತಡೆಯಲು ಕಾರ್ಮಿಕರು ಮತ್ತೆ ಧ್ವನಿಯೆತ್ತಬೇಕಾದ ಅಗತ್ಯತೆ ಇದೆ ಎಂದರು.

ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರವು ಸ್ವಿರ್ ಬ್ಯಾಂಕ್‌ನಿಂದ ಕಪ್ಪು ಹಣ ತರುತ್ತೇವೆ ಎಂದು ಹೇಳಿ ಅಧಿಕಾರಕ್ಕೇರಿ ಇದೀಗ ದೇಶದಲ್ಲಿರುವ ಕೇವಲ ಬಡವರಲ್ಲಿ, ಕೂಲಿ ಕಾರ್ಮಿಕರಲ್ಲಿದ್ದ 500, 1000 ಸಾವಿರ ನೋಟುಗಳನ್ನು ಕಪ್ಪು ಹಣವೆಂದು ಘೋಷಣೆ ಮಾಡಲು ಹೊರಟಿದೆ. ಕಪ್ಪು ಹಣ ಇರುವವರು ಹಣವನ್ನು ಈಗಾಗಲೇ ಭೂಮಿಯಲ್ಲಿ, ಚಿನ್ನಾಭರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅದಾನಿಯಂತವರೇ ಇಂದು ಮಂಗಳೂರಿನಲ್ಲಿ ಭೂಮಿಯನ್ನು ಖರೀದಿಸಿದ್ದಾರೆಂದಾದರೆ ಯಾವ ರೀತಿಯಲ್ಲಿ ಕಪ್ಪು ಹಣ ಬಳಕೆಯಾಗುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

 ಸಮಾರಂಭದ ಅಧ್ಯಕ್ಷತೆಯನ್ನು ಉಳ್ಳಾಲ ವಲಯ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಜನಾರ್ದನ ಅವರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News