ಸ್ವ ಪರಿಹಾಸ್ಯ ಮಾಡಿಕೊಂಡು ಸಂತೋಷ ಪಡುವುದು ಉತ್ತಮ- ಡಾ. ಎಚ್. ಮಾಧವ ಭಟ್
ಪುತ್ತೂರು, ಡಿ.11 : ಇತರರನ್ನು ಹಾಸ್ಯಕ್ಕೆ ಒಳಪಡಿಸಿ ಮುಜುಗರಪಡುವ ಬದಲು ತನ್ನನ್ನು ತಾನು ಪರಿಹಾಸ್ಯ ಮಾಡಿಕೊಂಡು ಸಂತೋಷಪಡುವುದು ಉತ್ತಮ ಎಂದು ವಿವೇಕಾನಂದ ಕಾಲೇಜ್‌ನ ನಿವೃತ್ತ ಪ್ರಾಂಶುಪಾಲ ಡಾ ಎಚ್ ಮಾಧವ ಭಟ್ ಹೇಳಿದರು.
ಅವರು ಪುತ್ತೂರು ಬಿಎಸ್‌ಎನ್‌ಎಲ್ ಕಛೇರಿಯ ಉದ್ಯೋಗಿ ಸಂಧ್ಯಾ ದತ್ತಾತ್ರೇಯ ರಾವ್ ಬರೆದಿರುವ ಹಾಸ್ಯ ಪ್ರಹಸನ ಸಂಕಲನ ‘ಬೇವು ಬೆಲ್ಲ’ ಪುಸ್ತಕವನ್ನು ಶನಿವಾರ ಅನಾವರಣಗೊಳಿಸಿ ಮಾತನಾಡುತ್ತಾ, ಕಥೆ, ಕಾದಂಬರಿ, ನಾಟಕ, ಕವನ ಮುಂತಾದವುಗಳು ನೀತಿ ಬೋಧೆಗಳನ್ನು ಒಳಗೊಂಡಿರಬೇಕಾಗಿಲ್ಲ. ಲೇಖಕ ತನ್ನ ರಚನೆಯಲ್ಲಿ ವಿಷಯಗಳನ್ನು ಅತ್ಯಂತ ಗಂಭೀರವಾಗಿ ಪ್ರಸ್ತುತಪಡಿಸುವ ಬದಲು, ತಿಳಿ ಹಾಸ್ಯಭರಿತವಾಗಿ ವ್ಯಕ್ತ ಪಡಿಸಿದಾಗ ಓದುಗರ ತುಟಿ ಅರಳುತ್ತದೆ ಮತ್ತು ಮನಸ್ಸಿಗೆ ಮುದ ನೀಡುತ್ತದೆ ಎಂದು ಹೇಳಿದರು.
‘ಹಾಸ್ಯ ಮತ್ತು ಸ್ವಾಸ್ಥ್ಯ’ ಕುರಿತು ವಿಶೇಷ ಉಪನ್ಯಾಸ ನೀಡಿದ ಮಕ್ಕಳ ತಜ್ಞೆ ಮತ್ತು ಮನೋಚಿಕಿತ್ಸಕಿ ಡಾ ಸುಲೇಖಾ ವರದರಾಜ್ ಮಾತನಾಡಿ, ನಿರೀಕ್ಷೆಗಳು ಮತ್ತು ನೈಜತೆ ಹೊಂದಿಕೆಯಾಗದ ಸಂದರ್ಭಗಳು ಹಾಸ್ಯಕ್ಕೆ ಕಾರಣವಾಗುತ್ತದೆ. ಹಾಸ್ಯವು ಮಾನವನ ಮಾನಸಿಕ ಆರೋಗ್ಯವನ್ನು ಉತ್ತಮ ಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಸ್ಯದ ಮೂಲಕ ಭಾವನೆಗಳನ್ನು ಹೊರಹಾಕ ಬಹುದು, ಸಾಮಾಜಿಕ ವ್ಯವಸ್ಥೆಗಳನ್ನು ಸರಿಪಡಿಸಬಹುದು, ಇತರರಿಗೆ ಹತ್ತಿರವಾಗಬಹುದು, ಭಯವನ್ನು ನಿವಾರಿಸಬಹುದು ಹಾಗೂ ಬುದ್ದಿ ಶಕ್ತಿಯನ್ನು ಹೆಚ್ಚಿಸಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ ಪುರಂದರ ಭಟ್ ಮಾತನಾಡಿ ಸಾಹಿತ್ಯಕ್ಕೆ ಪ್ರವೇಶ ಮಾಡಬೇಕಾದರೆ ಮನೆಯ ವಾತಾವರಣ ಉತ್ತಮವಾಗಿರಬೇಕು. ಕೆಲವೊಮ್ಮೆ ಹಾಸ್ಯವು ಕೀಳು ಅಭಿರುಚಿಯನ್ನುಂಟು ಮಾಡಬಹುದು, ಹಾಗೆಯೇ ಉನ್ನತಿಯೆಡೆಗೂ ಕೊಂಡೊಯ್ಯಬಹುದು. ನಮ್ಮ ಎಲ್ಲಾ ರಂಗ ಚಟುವಟಿಕೆಗಳಲ್ಲಿ ಹಾಸ್ಯ ರಸವೇ ಪ್ರಧಾನವಾದುದು ಎಂದು ಹೇಳಿದರು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ. ದತ್ತಾತ್ರೇಯ ರಾವ್ ಪ್ರಸ್ತಾವನೆಗೈದರು.
ಲೇಖಕಿ ಸಂಧ್ಯಾ ದತ್ತಾತ್ರೇಯ ರಾವ್ ಸ್ವಾಗತಿಸಿದರು.
ಹಿರಿಯ ಸಾಹಿತಿ, ನಿವೃತ್ತ ಉಪನ್ಯಾಸಕ ಪ್ರೊ. ಹರಿನಾರಾಯಣ ಮಾಡಾವು ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ದ್ಯುತಿ ದತ್ತಾತ್ರೇಯ ರಾವ್ ಮತ್ತು ದೀಕ್ಷಾ ಶಶಿಧರ್ ಇವರಿಂದ ನೃತ್ಯ ಕಾರ್ಯಕ್ರಮ ಜರಗಿತು.