ಡಿಜಿಟಲ್ ಪಾವತಿ ಬೆಂಬಲಕ್ಕೆ ಶೀಘ್ರವೇ ಸಹಾಯವಾಣಿ
ಹೊಸದಿಲ್ಲಿ, ಡಿ.11: ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು ಒಂದು ಟಿವಿ ವಾಹಿನಿ ಹಾಗೂ ಒಂದು ಜಾಲತಾಣ ಈಗಾಗಲೇ ಸೃಷ್ಟಿಯಾಗಿವೆ. ಇದೀಗ, ನಗದು ರಹಿತ ವಹಿವಾಟಿನ ಬಗ್ಗೆ ಶಿಕ್ಷಣ ನೀಡಲು ಹಾಗೂ ಬೆಂಬಲಕ್ಕಾಗಿ, ರಾಷ್ಟ್ರೀಯ ಶುಲ್ಕ ರಹಿತ ಸಹಾಯವಾಣಿ ಸಂಖ್ಯೆ ‘14444’ ಶೀಘ್ರವೇ ಚಾಲನೆಯಾಗಲಿದೆ. ಒಂದು ವಾರದೊಳಗೆ ಈ ಸೇವೆ ಚಾಲನೆಗೊಳ್ಳುವ ನಿರೀಕ್ಷೆಯಿದೆ.
ಜನರಿಗೆ ಸಾಮೂಹಿಕ ಮಟ್ಟದಲ್ಲಿ ಬೆಂಬಲ ಒದಗಿಸುವುದಕ್ಕೆ ನಾಸ್‌ಕಾಮ್‌ನ ಸಹಾಯವನ್ನು ಸರಕಾರ ಕೋರಿದೆ. ತಾವು ರಾಷ್ಟ್ರವ್ಯಾಪಿ ಏಕ ಸಹಾಯವಾಣಿ ಸ್ಥಾಪಿಸುವಂತೆ ವಿನಂತಿಸಿದ್ದೇವೆ. ಇದೀಗ ದೂರ ಸಂಪರ್ಕ ಇಲಾಖೆ ‘14444’ ಸಂಖ್ಯೆಯನ್ನು ಮೀಸಲಿರಿಸಿದೆ. ತಾವು ಹಿಂತುದಿಯಲ್ಲಿ ಕಾಲ್‌ಸೆಂಟರ್ ಬೆಂಬಲವನ್ನು ಇರಿಸಲಿದ್ದೇವೆ. ಇದು ಕಾರ್ಯಾಚರಣೆಯ ಮುಂದುವರಿದ ಹಂತವಾಗಿದೆಯೆಂದು ಮಾಹಿತಿ ತಂತ್ರಜ್ಞಾನ ಸಂಸ್ಥೆ ನಾಸ್‌ಕಾಮ್‌ನ ಅಧ್ಯಕ್ಷ ಆರ್.ಚಂದ್ರಶೇಖರ್ ತಿಳಿಸಿದ್ದಾರೆ.
ಇದು ವಾಸ್ತವ ವಹಿವಾಟಿನ ಪರಿವರ್ತನೆಯ ಗುರಿಯೊಂದಿಗೆ ಜಾಗೃತಿ ಕಾರ್ಯಕ್ರಮವಾಗಿರುತ್ತದೆ. ಇದು ಜನರಿಗೆ ಅತ್ಯಂತ ಸೂಕ್ತವಾದ ಆಯ್ಕೆಯಲ್ಲಿ ತೊಡಗಿಕೊಳ್ಳಲು ನೀಡುವ ಮೊದಲ ಹಂತದ ಸಹಾಯವಾಗಿದೆ. ಅದಕ್ಕೆ ವ್ಯಕ್ತಿಯೊಬ್ಬ ಫೀಚರ್ ಫೋನ್ ಪಡೆದಿದ್ದಾನೆಯೇ ಇಲ್ಲವೇ, ಅಧಾರ್ ಸಂಖ್ಯೆ ಇದೆಯೇ ಇಲ್ಲವೇ, ಬ್ಯಾಂಕ್ ಖಾತೆ ಇದೆಯೇ ಇಲ್ಲವೆ ಇತ್ಯಾದಿ ಹಲವನ್ನು ನೋಡುವ ಅಗತ್ಯವಿದೆಯೆಂದು ಅವರು ಹೇಳಿದ್ದಾರೆ.
ನ.8ರಂದು ದೊಡ್ಡ ನೋಟು ರದ್ದತಿಯ ಬಳಿಕ ಡಿಜಿಟಲ್ ಪಾವತಿಯ ಪ್ರಮಾಣ ಶೇ.400ರಿಂದ ಒಂದು ಸಾವಿರದವರೆಗೆ ಏರಿಕೆಯಾಗಿದೆಯೆಂದು ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.