×
Ad

ಡಿ.22ರಂದು ಸಮಾನ ವೇತನಕ್ಕಾಗಿ ಪ್ರತಿಭಟನೆ: ಎಸ್.ವರಲಕ್ಷ್ಮೀ

Update: 2016-12-11 20:17 IST

ಉಡುಪಿ, ಡಿ.11: ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದರೂ ಸರಕಾರ ಅದನ್ನು ಅನುಷ್ಠಾನ ಗೊಳಿಸುತ್ತಿಲ್ಲ. ಗುತ್ತಿಗೆ ಆಧಾರಿತ ನೌಕರರಿಗೆ ಸಮಾನ ವೇತನ ನೀಡುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಡಿ.22ರಂದು ರಾಷ್ಟ್ರ ವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಭಾರತ ಸಿಐಟಿಯು ಉಪಾಧ್ಯಕ್ಷೆ ಹಾಗೂ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 2.5ಲಕ್ಷ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ನೌಕರರಿದ್ದಾರೆ. ಖಾಸಗಿ ಕ್ಷೇತ್ರದಲ್ಲಿ ಇವರ ಸಂಖ್ಯೆ ಶೇ.60ರಷ್ಟಿದೆ. ಇವರಿಗೆ ಸರಕಾರ ಖಾಯಂ ನೌಕರರಿಗೆ ನೀಡುವಷ್ಟೆ ಸಮಾನ ವೇತನ ವನ್ನು ನೀಡಬೇಕು ಎಂದರು.

ಶಿಕ್ಷಣ, ಆರೋಗ್ಯ, ಆಹಾರ ಮತ್ತು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ 72 ಸ್ಕೀಂಗಳನ್ನು ಭಾರತ ಸರಕಾರ 33 ಸ್ಕೀಂಗಳಾಗಿ ಮರ್ಜ್ ಮಾಡಿದೆ. ಕಳೆದ ಬಜೆಟ್‌ನಲ್ಲಿ ಅದಕ್ಕೆ ನೀಡುತ್ತಿದ್ದ ಅನುದಾನದಲ್ಲಿ 3ಲಕ್ಷ ಕೋಟಿ ರೂ. ಕಡಿತ ಮಾಡಲಾಗಿದೆ. ಇದರ ಪರಿಣಾಮ ಬಿಸಿಯೂಟ, ಅಂಗನವಾಡಿ ನೌಕರರ ಮೇಲೆ ಆಗಿದೆ. ಈ ಸ್ಕೀಮ್‌ಗಳಡಿಯಲ್ಲಿ ಒಂದು ಕೋಟಿ ಮಂದಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಶೇ.90ರಷ್ಟು ಮಹಿಳೆಯರಾಗಿದ್ದಾರೆ ಎಂದು ಅವರು ಹೇಳಿದರು.

ದೇಶದಲ್ಲಿ 26ಲಕ್ಷ ಹಾಗೂ ರಾಜ್ಯದಲ್ಲಿ 1.20ಲಕ್ಷ ಬಿಸಿಯೂಟ ನೌಕರರು ದುಡಿಯುತ್ತಿದ್ದು, ಇವರಿಗೆ ಮಾಸಿಕ 600ರೂ. ವೇತನ ನೀಡಲಾಗುತ್ತಿದೆ. ರಾಜ್ಯದಲ್ಲಿ ಕೆಲಸ ನಿರ್ವಹಿಸುತ್ತಿರುವ 30ಸಾವಿರ ಆಶಾ ಕಾರ್ಯಕರ್ತೆಯರಿಗೆ ಸರಿಯಾಗಿ ಸಂಬಳವೇ ನೀಡುತ್ತಿಲ್ಲ. ಅಂಗನವಾಡಿ ನೌಕರರಿಗೆ ಕನಿಷ್ಠ ಕೂಲಿ ಯನ್ನು ನೀಡುತ್ತಿಲ್ಲ. ಹೀಗೆ ಶಿಕ್ಷಣ, ಆಹಾರ, ಆರೋಗ್ಯ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಸರಕಾರ ಶೋಷಣೆ ಮಾಡುತ್ತಿದೆ. ಇದನ್ನು ವಿರೋಧಿಸಿ ಸಿಐಟಿಯು ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರು ಹಾಗೂ ಅಂಗನವಾಡಿ ನೌಕರರು ಜ.20ರಂದು ಮುಷ್ಕರ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.

 ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಕಾರ್ಮಿಕರಿಗೆ ನೀಡುತ್ತಿರುವ ಕನಿಷ್ಠ ವೇತನ ತೀರಾ ಕಡಿಮೆ. ಕಾರ್ಮಿಕ ಇಲಾಖೆಯ ಕನಿಷ್ಠ ಕೂಲಿ ಸಲಹಾ ಸಮಿತಿಯು 23 ವಿಭಾಗಗಳ ಕಾರ್ಮಿಕರಿಗೆ ಕನಿಷ್ಟ ವೇತನ 10500 ರೂ. ನೀಡಲು ತೀರ್ಮಾನಿಸಿದೆ. ಅದನ್ನು 9 ವಿಭಾಗಗಳಲ್ಲಿ ಜಾರಿಗೆ ತರ ಲಾಗಿದೆ. ಆದರೆ ಇದರ ವಿರುದ್ಧ ಹೈಕೋರ್ಟ್ ಏಕಪಕ್ಷೀಯವಾಗಿ ತಡೆ ಯಾಜ್ಞೆ ನೀಡಿದೆ. ಇದಕ್ಕೆ ಕಾರಣ ಸರಕಾರದ ಅಸಮರ್ಪಕ ವಾದ. ಇದು ಸರಕಾರ ಧೋರಣೆ ಬಂಡವಾಳಶಾಹಿಗಳ ಪರ ಇರುವುದನ್ನು ತೋರಿಸುತ್ತದೆ. ಈ ಸಂಬಂಧ ಹೊರಡಿಸಲಾದ ನೋಟಿಫಿಕೇಶನ್‌ಗೆ ಸರಕಾರದ ಪ್ರಧಾನ ಕಾರ್ಯದರ್ಶಿ ಸಹಿ ಹಾಕಿಲ್ಲ ಎಂಬುದು ದುರಂತ. ಹಾಗಾಗಿ ಕಾರ್ಮಿಕರಿಗೆ ಕನಿಷ್ಠ ವೇತನ 18ಸಾವಿರ ರೂ. ನೀಡುವಂತೆ ಆಗ್ರಹಿಸಿ ಸಿಐಟಿಯು ಸೇರಿ ದಂತೆ ಎಲ್ಲ ಕಾರ್ಮಿಕರು ಜನವರಿ ತಿಂಗಳಲ್ಲಿ ಅನಿರ್ಧಿಷ್ಠಾವಧಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮುಖಂಡ ಕವಿರಾಜ್, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ರತಿ ಶೆಟ್ಟಿ, ಕಾರ್ಯದರ್ಶಿ ಸುಶೀಲಾ ನಾಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News