ಭಾರತ ಮೂಲದ 3 ವಿದ್ಯಾರ್ಥಿಗಳಿಗೆ 2 ಲಕ್ಷ ಡಾ. ಮೊತ್ತದ ವಿಜ್ಞಾನ ಪ್ರಶಸ್ತಿ

Update: 2016-12-11 15:20 GMT

ಹ್ಯೂಸ್ಟನ್, ಡಿ. 11: ಮೂವರು ಭಾರತ ಮೂಲದ ವಿದ್ಯಾರ್ಥಿಗಳು ವಿಜ್ಞಾನ ಸ್ಪರ್ಧೆಯೊಂದರಲ್ಲಿ ಒಟ್ಟು 2 ಲಕ್ಷ ಡಾಲರ್ ವಿದ್ಯಾರ್ಥಿವೇತನವನ್ನು ಗೆದ್ದಿದ್ದಾರೆ. ಅವರು ನಡೆಸಿರುವ ವಿನೂತನ ಸಂಶೋಧನೆಗಾಗಿ ಈ ಪ್ರಶಸ್ತಿ ಗೆದ್ದಿದ್ದಾರೆ.

ಅವರು ನಡೆಸಿರುವ ಸಂಶೋಧನೆಯು ಸ್ಕೀರೊಫ್ರೀನಿಯ ಸೇರಿದಂತೆ ವಿವಿಧ ಕಾಯಿಲೆಗಳನ್ನು ಪತ್ತೆಹಚ್ಚಲು ವೈದ್ಯರಿಗೆ ನೆರವಾಗಲಿದೆ.

ಅವರ ಪೈಕಿ 16 ವರ್ಷದ ಶ್ರೀಯಾ ಮತ್ತು ಆದ್ಯಾ ಬೀಸಮ್ ತದ್ರುಪಿ ಅವಳಿ ಜವಳಿಗಳು. ಅವರು ಟೆಕ್ಸಾಸ್‌ನ ಪ್ಲಾನೊದಲ್ಲಿ 11ನೆ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ.

 ಮಂಗಳವಾರ ನಡೆದ 17ನೆ ವಾರ್ಷಿಕ ಸೀಮನ್ಸ್ ಗಣಿತ, ವಿಜ್ಞಾನ ಮತ್ತು ತಂತ್ರಜ್ಞಾನ ಸ್ಪರ್ಧೆಯಲ್ಲಿ ಅವರು ಒಂದು ಲಕ್ಷ ಡಾಲರ್ ಬಹುಮಾನ ಮೊತ್ತವನ್ನು ಹಂಚಿಕೊಂಡಿದ್ದಾರೆ. ‘ಲಿಂಕ್ಡ್ ನ್ಯೂರೊ-ಫಝಿ ಇನ್ಫರೆನ್ಸ್ ಸಿಸ್ಟಮ್: ಅ ನಾವೆಲ್ ಅಪ್ರೋಚ್ ಟು ಸ್ಕೀರೊಫ್ರೀನಿಯ ಡಯಗ್ನಾಸಿಸ್’ ಎಂಬ ಹೆಸರಿನ ಅವರ ಯೋಜನೆಗೆ ಬಹುಮಾನ ಲಭಿಸಿದೆ.

ಒರೆಗಾನ್ ಎಪಿಸ್ಕೋಪಲ್ ಸ್ಕೂಲ್ ವಿದ್ಯಾರ್ಥಿ ವಿನೀತ್ ಎಡುಪುಗಂಟಿ ಒಂದು ಲಕ್ಷ ಡಾಲರ್ ಮೊತ್ತದ ವೈಯಕ್ತಿಕ ವಿಭಾಗದ ಬಹುಮಾನವನ್ನು ಗೆದ್ದಿದ್ದಾರೆ. ದೇಹದ ಒಳಗಿನ ಆರೋಗ್ಯ ಸಮಸ್ಯೆಗಳ ಮೇಲೆ ನಿಗಾ ಇಡಲು ಹಾಗೂ ಪತ್ತೆಹಚ್ಚಲು ವೈದ್ಯರು ಬಳಸುವ ವಿಧಾನಗಳನ್ನು ಬದಲಾಯಿಸುವ ಸಾಮರ್ಥವುಳ್ಳ, ದೇಹದ ಒಳಗೆ ಕಳುಹಿಸಬಹುದಾದ ಬ್ಯಾಟರಿಯೊಂದನ್ನು ಅಭಿವೃದ್ಧಿಪಡಿಸಿರುವುದಕ್ಕಾಗಿ ಅವರಿಗೆ ಈ ಪ್ರಶಸ್ತಿ ಒಲಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News