ಕ್ರಿಕೆಟಿಗ ಇರ್ಫಾನ್ ಪಠಾಣ್‌ರಿಂದ ಸುರತ್ಕಲ್ ಸ್ಟ್ರೈಕರ್ಸ್ ತಂಡಕ್ಕೆ ಶುಭ ಹಾರೈಕೆ
ಮಂಗಳೂರು, ಡಿ. 11: ಪಣಂಬೂರು ಎನ್‌ಎಂಪಿಟಿ ಮೈದಾನದಲ್ಲಿ ಡಿ. 17 ರಂದು ಆರಂಭಗೊಳ್ಳಲಿರುವ ಅಲ್ ಮುಝೈನ್- ವೈಟ್ ಸ್ಟೋನ್ - ಎಂಪಿಎಲ್ ಆವೃತ್ತಿಯ 20- 20 ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸುವ ಸುರತ್ಕಲ್ ಸ್ಟ್ರೈಕರ್ಸ್ ತಂಡದ ರಾಯಭಾರಿ, ಭಾರತೀಯ ತಂಡದ ಆಲ್‌ರೌಂಡರ್ ಇರ್ಫಾನ್ ಪಠಾಣ್ ರವಿವಾರ ನಗರಕ್ಕೆ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಪಂದ್ಯಾವಳಿಗಳು ಯುವ ಪ್ರತಿಭೆಗಳ ಶೋಧಕ್ಕೆ ಸಹಕಾರಿಯಾಗಿದ್ದು, ಸುರತ್ಕಲ್ ಸ್ಟೈಕರ್ಸ್ ತಂಡ ಅತ್ಯುತ್ತಮ ನಿರ್ವಹಣೆ ನೀಡಲೆಂದು ಶುಭ ಹಾರೈಸಿದರು.
ಸುರತ್ಕಲ್ ಸ್ಟ್ರೈಕರ್ಸ್ ತಂಡದ ಮಾಲಕ ಹಸನ್ ಶಾಹಿದ್ ಅವರು ತೃತೀಯ ಆವೃತ್ತಿಯ ಎಂಪಿಎಲ್‌ನಲ್ಲಿ ದ್ವಿತೀಯ ಬಾರಿಗೆ ಭಾಗವಹಿಸುತ್ತಿರುವ ತಮ್ಮ ತಂಡದ ಬಗ್ಗೆ ಮಾಹಿತಿ ನೀಡಿದರು. ಕಳೆದ ವರ್ಷದ ಎಂಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ನಿರ್ವಹಣೆ ತೋರಿರುವ ತಮ್ಮ ತಂಡ ಸೆಮಿ ಫೈನಲ್‌ನಲ್ಲಿ ಉತ್ತಮ ಹೋರಾಟ ನೀಡಿ ನಿರ್ಗಮಿಸಿದೆ. ಈ ವರ್ಷ ಇನ್ನಷ್ಟು ಉತ್ತಮ ನಿರ್ವಹಣೆ ತೋರುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ತಂಡದ ನಾಯಕ ಝಹೀರ್ ಇಬ್ರಾಹೀಂ, ತರಬೇತುದಾರ ನಝೀರುದ್ದೀನ್, ಎಂಪಿಎಲ್ ಚೇರ್ಮನ್ ಸಿರಾಜ್, ತಂಡದ ಇನ್ನೋರ್ವ ಮಾಲಕ ಝಹೀರ್ ಝಕರಿಯ್ಯ, ಪ್ರಾಯೋಜಕ ಗೋಪಿನಾಥನ್ ಸುಬ್ರಹ್ಮಣ್ಯಂ ಉಪಸ್ಥಿತರಿದ್ದರು.
ಅಝರುದ್ದೀನ್‌ರಿಂದ ಚಾಲನೆ
ಡಿ.17ರಂದು ಸಂಜೆ 4:30ಕ್ಕೆ ಆರಂಭಗೊಳ್ಳಲಿರುವ ಎಂಪಿಎಲ್ ಆವೃತ್ತಿಯ 20-20 ಕ್ರಿಕೆಟ್ ಪಂದ್ಯಾಟಕ್ಕೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಚಾಲನೆ ನೀಡಲಿದ್ದಾರೆ.