×
Ad

ಅಲ್ಪಸಂಖ್ಯಾತ ಕಲ್ಯಾಣ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ : ಗಫೂರ್

Update: 2016-12-11 21:56 IST

ಉಡುಪಿ, ಡಿ.11: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕಾಗಿ ಜಾರಿಗೊಳಿಸುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗು ವುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದ್ದಾರೆ.

ಅಧ್ಯಕ್ಷರಾಗಿ ಡಿ.5ರಂದು ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಉಡುಪಿ ಜಿಲ್ಲೆಗೆ ಆಗಮಿಸಿದ ಗಫೂರ್, ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತಿದ್ದರು.

ಮತೀಯ ಅಲ್ಪಸಂಖ್ಯಾತರ ಏಳಿಗೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಲ್ಲದೇ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಪರಿಣಾಮಕಾರಿ ಜನತೆಗೆ ತಲುಪಿಸುವ ಕೆಲಸವನ್ನು ಮಾಡಲಾ ಗುವುದು. ಅಲ್ಲದೇ ಈಗಿರುವ ಪ್ರಮುಖ ಯೋಜನೆಗಳಾದ ವಿದ್ಯಾರ್ಥಿಗಳಿಗೆ ಅರಿವು ಯೋಜನೆ, ಗಂಗಾಕಲ್ಯಾಣ, ನೇರಸಾಲ, ಸ್ವಾವಲಂಬನಾ ಸಾಲ ಯೋಜನೆ, ಕೃಷಿಭೂಮಿ ಖರೀದಿ ಯೋಜನೆಗಳ ಕುರಿತು ಜನರಲ್ಲಿ ವ್ಯಾಪಕ ಅರಿವು ಮೂಡಿಸಲು ಸಹ ಪ್ರಯತ್ನಿಸಲಾಗುವುದು ಎಂದರು.

ನಿಗಮದ ವಾರ್ಷಿಕ ಬಜೆಟ್ 250 ಕೋಟಿ ರೂ.ಗಳಾಗಿದೆ. ಇದರಲ್ಲಿ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ಪರಿಷತ್‌ನ 50 ಕೋಟಿ ರೂ.ಬಜೆಟ್ ಸಹ ಸೇರಿದೆ. ಕೇಂದ್ರ ಸರಕಾರದಿಂದ ಬರಬೇಕಿರುವ 23 ಕೋಟಿ ರೂ.ಗಳ ಅನುದಾನಕ್ಕಾಗಿ ರಾಜ್ಯ ಸರಕಾರದ ಗ್ಯಾರಂಟಿಯನ್ನು ಇತ್ತೀಚೆಗೆ ಕಳುಹಿಸಲಾಗಿದ್ದು, ಶೀಘ್ರವೇ ಈ ಹಣ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಇದನ್ನು ವಿದ್ಯಾರ್ಥಿಗಳಿಗೆ ಅರಿವು ವಿದ್ಯಾಭ್ಯಾಸ ಸಾಲವನ್ನು ನೀಡಲು ಬಳಸಲಾಗುವುದು ಎಂದರು.

ಅರಿವು ಯೋಜನೆಯ ಅನುಷ್ಠಾನದಲ್ಲಿ ಉಡುಪಿ ಜಿಲ್ಲೆಯ ಸಾಧನೆ ತೃಪ್ತಿಕರವಾಗಿದ್ದು, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳ ಸಾಧನೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಅಲ್ಲಿ ಕ್ರಮವಾಗಿ 1000 ಹಾಗೂ 2000 ಅರ್ಜಿಗಳು ಬಂದಿವೆ. ಅಲ್ಲಿ ಶೀಘ್ರ ಅಧಿಕಾರಿಗಳ ಸಭೆ ನಡೆಸಿ ಅರ್ಜಿಗಳ ಬಗ್ಗೆ ತ್ವರಿತಗತಿಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ವಿದೇಶಗಳಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ: ಅರಿವು ಯೋಜನೆಯ ಮೂಲಕ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು 10 ಲಕ್ಷ ರೂ.ಗಳಿಂದ 40 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಈವರೆಗೆ 600 ಮಂದಿ ಆಯ್ಕೆಯಾಗಿದ್ದಾರೆ.

ಅರಿವು ಯೋಜನೆಯಡಿ 6330 ವಿದ್ಯಾರ್ಥಿಗಳಿಗೆ 20.90 ಕೋಟಿ ರೂ.ಸಾಲ ಮಂಜೂರು ಮಾಡಲಾಗಿದೆ.ಇವರ ಪೈಕಿ 3409 ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ರ್ಯಾಂಕಿಂಗ್ ಪಡೆಯುವ ಮೂಲಕ ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ ಎಂದು ಗಫೂರ್ ತಿಳಿಸಿದರು.

ಕೃಷಿ ಭೂಮಿ ಖರೀದಿ ಯೋಜನೆಯಡಿ ಭೂರಹಿತ ಅಲ್ಪಸಂಖ್ಯಾತ ಸಮುದಾಯದ ಕೃಷಿ ಕಾರ್ಮಿಕರಿಗೆ ಒಂದು ಎಕರೆ ತರಿ ಭೂಮಿ ಅಥವಾ ಎರಡು ಎಕರೆ ಖುಷ್ಕಿ ಜಮೀನು ಖರೀದಿಸಲು ಅವಕಾಶವಿದೆ. ಇದರಲ್ಲಿ ಭೂಮಿಯ ಮಾರ್ಗದರ್ಶಿ ಬೆಲೆಯನ್ನು ರಾಜ್ಯ ಸರಕಾರ 2.50 ಲಕ್ಷ ರೂ.ಗಳಿಂದ 7.50 ಲಕ್ಷ ರೂ.ಗಳಿಗೆ ಏರಿಸಿದೆ ಎಂದರು.

 ಪತ್ರಿಕಾಗೋಷ್ಠಿಯಲ್ಲಿ ನಿಗಮದ ನಿರ್ದೇಶಕ ಶೈಲೇಂದ್ರನಾಥ ಜೈನ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್‌ಅಮೀನ್ ಪಡುಕೆರೆ, ಅಶೋಕಕುಮಾರ್ ಕೊಡವೂರು ಹಾಗೂ ನಿಗಮದ ಜಿಲ್ಲಾ ವ್ಯವಸ್ಥಾಪಕ ಶ್ರೀಧರ ಭಂಡಾರಿ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 682 ಮಂದಿಗೆ ಅರಿವು ಸಾಲ

ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ 682 ಮಂದಿಗೆ 2.04 ಕೋಟಿ ರೂ. ಸಾಲ ಮಂಜೂರಾಗಿದೆ. ಅದರಲ್ಲಿ ಈವರೆಗೆ 466 ಮಂದಿಗೆ ಒಟ್ಟು 1.92 ಕೋಟಿ ರೂ.ಬಿಡುಗಡೆಯಾಗಿದೆ. 218 ಮುಸ್ಲಿಂ ವಿದ್ಯಾರ್ಥಿಗಳಿಗೆ 89 ಲಕ್ಷ ರೂ., 235 ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗೆ 97 ಲಕ್ಷ ರೂ. ಹಾಗೂ 13 ಜೈನ್ ಸಮುದಾಯದ ವಿದ್ಯಾರ್ಥಿಗಳಿಗೆ 6 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಗಫೂರ್ ತಿಳಿಸಿದರು.

ಜಿಲ್ಲೆಯಲ್ಲಿ ನಿಗಮದ ವಿವಿಧ ಸಾಲ ಯೋಜನೆಯಲ್ಲಿ ಗುರಿಮೀರಿದ ಸಾಧನೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಒಟ್ಟು 8,716 ಮಂದಿಗೆ 19.13 ಕೋಟಿ ರೂ. ಅನುದಾನ ಮಂಜೂರಾಗಿದೆ. ಈ ಮೂಲಕ ಶೇ.122ರ ಸಾಧನೆ ಮಾಡಲಾಗಿದೆ. ಮುಸ್ಲಿಂ ಸಮುದಾಯಕ್ಕೆ 6.94 ಕೋಟಿ ರೂ.(3511 ಮಂದಿಗೆ), ಕ್ರಿಶ್ಚಿಯನ್‌ಇಗೆ 11.02 ಕೋಟಿ ರೂ.(4,205), ಜೈನ್ ಸಮುದಾಯಕ್ಕೆ 1.16ಕೋಟಿರೂ.(460) ಅನುದಾನ ಬಿಡುಗಡೆಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News