ಬೆಳ್ತಂಗಡಿ: ಸರ್ವಧರ್ಮ ಪ್ರಾರ್ಥನಾ ವಿಚಾರ ಸಂಕಿರಣ
ಬೆಳ್ತಂಗಡಿ, ಡಿ. 11 : ಧರ್ಮಗಳ ಬಗ್ಗೆ ತಿಳುವಳಿಕೆಯ ಕೊರತೆಯಿಂದಾಗಿ ಪರಸ್ಪರ ಅನುಮಾನಗಳು ಮೂಡಲು ಕಾರಣವಾಗುತ್ತಿದೆ ಇದನ್ನು ಹೋಗಲಾಡಿಸುವ ಕಾರ್ಯಕ್ಕೆ ಎಲ್ಲ ಧರ್ಮಗಲ ಮುಖಂಡರುಗಳು ಪ್ರಯತ್ನಿಸಬೇಕಾದ ಅಗತ್ಯವಿದೆ, ಧರ್ಮಗಳ ನಡುವಿನ ಸಮನ್ವಯತೆಯ ಸಾಧನೆಗಾಗಿ ಸೌಹಾರ್ದ ವೇದಿಕೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ವೇದಿಕೆಯ ಅಧ್ಯಕ್ಷ ಹಾಗೂ ಧರ್ಮಾಧ್ಯಕ್ಷ ಬಿಶಪ್ ಲಾರೆನ್ಸ್ ಮುಕ್ಕುಯಿ ಹೇಳಿದರು.
ಅವರು ಭಾನುವಾರ ಸೌಹಾರ್ದ ವೇದಿಕೆ ವತಿಯಿಂದ ಉದಯನಗರದಲ್ಲಿನ ಜ್ಞಾನ ನಿಲಯದಲ್ಲಿ ನಡೆದ ಪ್ರಾರ್ಥನೆಯ ಬಗ್ಗೆ ನಡೆದ ವಿಚಾರ ಸಂಕಿರಣದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಪರಸ್ಪರ ಅರಿವಿನ ಮೂಲಕ ಸಾಮರಸ್ಯಕ್ಕೆ ಬುನಾದಿ ಹಾಕಲು ಇಂತಹ ಕಾರ್ಯಕ್ರಮಗಳು ಅಗತ್ಯ. ಎಲ್ಲ ಧರ್ಮಗಳಲ್ಲಿಯೂ ಪ್ರಾರ್ಧನೆ ಮುಖ್ಯವಾಗಿದೆ ಏನು ಪ್ರಾರ್ಧಿಸುತ್ತೇವೆ ಎಂಬುದನ್ನು ಪರಸ್ಪರ ತಿಳಿದುಕೊಳ್ಳುವ ಪ್ರಯತ್ನ ಇದಾಗಿದೆ ಎಂದರು.
ಹಿಂದೂ ಧರ್ಮದಲ್ಲಿ ಪ್ರಾರ್ಥನೆಗಿರುವ ಮಹತ್ವದ ಬಗ್ಗೆ ಮಾತನಾಡಿದ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ , ಪ್ರಾರ್ಥನೆ ಎಂಬುದು ಚೆನ್ನಾಗಿ ಕೊಡುವಲ್ಲಿ ಬೇಡುವುದು ಎಂಬ ಅರ್ಥವನ್ನು ಹೊಂದಿದೆ. ಸರ್ವಶಕ್ತನಾದ ಭಗವಂತನಲ್ಲಿ ಬೇಡಲು ಅನ್ವಯವಾಗುವ ಶಬ್ದವಿದು. ಭಗವಂತ ಹಾಗು ಭಕ್ತನ ನಡುವೆ ಸಂವಹನ ಕ್ರಿಯೆಗಾಗಿ ಪ್ರಾರ್ಥನೆ ಇದೆ. ಹಿಂದೂ ಧರ್ಮದಲ್ಲಿ ವೈದಿಕ, ಪೌರಾಣಿಕ ಹಾಗೂ ಕರ್ಮಾಂಗದಲ್ಲಿ ಇದನ್ನು ನಿರ್ದೇಶಿಸಲ್ಪಟ್ಟಿದೆ. ಉದ್ದೇಶದ ಅಪೇಕ್ಷೆಯಿಲ್ಲದೆ ಮನುಷ್ಯ ಯಾವ ಕೆಲಸವನ್ನೂ ಮಾಡುವುದಿಲ್ಲ. ಉದ್ದೇಶವನ್ನು ಇಟ್ಟು ಕೊಂಡು ಮಾಡುವ ಪ್ರಾರ್ಥನೆ ನೈಮಿತ್ತಿಕ ಕರ್ಮವಾಗುತ್ತದೆ. ಇದು ನಿರ್ಗುಣವಾದರೆ, ಯಾವುದೇ ಅಪೇಕ್ಷೆಯಿಲ್ಲದೆ ಪ್ರಾರ್ಥನೆ ಮಾಡುವ ಯೋಗಿಗಳದ್ದು ಸಗುಣ ಪ್ರಾರ್ಥನೆಯಾಗುತ್ತದೆ. ಹೀಗಾಗಿ ಕರ್ಮದ ಅಂಗವಾಗಿ ಪ್ರಾರ್ಥನೆ ಇದೆ ಎಂದರು.
ಜೈನ ಮತದಲ್ಲಿ ಪ್ರಾರ್ಥನೆ ಕುರಿತು ಮುನಿರಾಜ ರೆಂಜಾಳ, ಇಸ್ಲಾಂ ಮತದಲ್ಲಿನ ಪ್ರಾರ್ಥನೆ ಬಗ್ಗೆ ಹಾಜಿ ಅಬ್ದುಲ್ ರಹಮಾನ್ ಹಾಗೂ ಕ್ರೈಸ್ತ ಮತದಲ್ಲಿನ ಪ್ರಾರ್ಥನೆ ವಿಚಾರವಾಗಿ ಬಗ್ಗೆ ಫಾ.ಶಾಜಿ ಮ್ಯಾಥ್ಯೂ ಉಪನ್ಯಾಸ ನೀಡಿದರು.
ಸಮನ್ವಯಕಾರರಾಗಿ ಸಂಸ್ಕೃತ ವಿದ್ವಾಂಸ ಇ. ಮಹಾಬಲ ಭಟ್, ನಿವೃತ್ತ ಪತ್ರಕರ್ತ ಶ್ರೀಕರ ಮರಾಠೆ ಉಪಸ್ಥಿತರಿದ್ದರು.
ವೇದಿಕೆ ಉಪಾಧ್ಯಕ್ಷ ಶ್ರೀಧರ ಜಿ. ಭಿಡೆ ಸ್ವಾಗತಿಸಿ ಪ್ರಸ್ತಾವಿಸಿದರು.
ವೇದಿಕೆಯ ಸದಸ್ಯರಾದ ಶ್ರೀನಾಥ್ ಹಾಗೂ ಕೇಶವ ಪೈ ಕಾರ್ಯಕ್ರಮ ನಿರ್ವಹಿಸಿದರು.
ಸೌಹಾರ್ದ ವೇದಿಕೆ ಕಾರ್ಯದರ್ಶಿ ಬಿ. ವಿಠಲ ಶೆಟ್ಟಿ ಇದ್ದರು.