ಜಯಲಲಿತಾ 1996ರ ಚುನಾವಣೆ ಸೋಲಲು ನಾನು ಕಾರಣ: ರಜನೀಕಾಂತ್
ಚೆನ್ನೈ, ಡಿ.11: ಜಯಲಲಿತಾರ ವಿರುದ್ಧ ತಾನು ಮಾಡಿದ ಟೀಕೆ ಮತ್ತು ಬಹಿರಂಗ ಆರೋಪಗಳ ಕಾರಣ ಅವರು 1996ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಾಣುವಂತಾಯಿತು ಎಂದು ನಟ ರಜನೀಕಾಂತ್ ಹೇಳಿದ್ದಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ‘ನಡಿಗರ್ ಸಂಘಂ’ (ದಕ್ಷಿಣ ಭಾರತ ಕಲಾವಿದರ ಸಂಘ) ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1996ರ ವಿಧಾನಸಭಾ ಚುನಾವಣೆ ವೇಳೆ ಜಯಲಲಿತಾರನ್ನು ಟೀಕಿಸಿ ಭಾಷಣ ಮಾಡಿದ್ದ ರಜನೀಕಾಂತ್, ಒಂದು ವೇಳೆ ಜಯಲಲಿತಾ ಮರಳಿ ಅಧಿಕಾರಕ್ಕೆ ಬಂದರೆ ದೇವರು ಕೂಡಾ ತಮಿಳುನಡನ್ನು ರಕ್ಷಿಸಲಾರ - ಎಂದು ಹೇಳಿದ್ದರು.
ನನ್ನ ಭಾಷಣದಿಂದ ಆಕೆ ಹತಾಶರಾಗಿದ್ದರು. ಅವರು 1996ರ ಚುನಾವಣೆಯಲ್ಲಿ ಸೋಲುವಂತಾಗಲು ನಾನು ಪ್ರಮುಖ ಕಾರಣವಾಗಿದ್ದೆ ಎಂದು ರಜನೀಕಾಂತ್ ನುಡಿದರು. ನನ್ನ ಮಗಳ ಮದುವೆಗೆ ಜಯಲಲಿತಾರನ್ನು ಆಮಂತ್ರಿಸಲು ಹೋದಾಗ ನನ್ನ ಹೃದಯ ಭಾರವಾಗಿತ್ತು. ಅವರು ಖಂಡಿತಾ ಬರೋದಿಲ್ಲ ಎಂದುಕೊಂಡಿದ್ದೆ. ಆದರೆ ಆಹ್ವಾನ ಪತ್ರ ಸ್ವೀಕರಿಸಿದ ಅವರು, ಏನೇ ಆದರೂ ಈ ಮದುವೆ ತಪ್ಪಿಸೋಲ್ಲ. ಪಕ್ಷದ ಕಾರ್ಯಕರ್ತರ ಮದುವೆ ಇದ್ದರು ಕೂಡಾ ಮೊದಲು ನಿಮ್ಮ ಮಗಳ ಮದುವೆಗೆ ಬರುತ್ತೇನೆ ಎಂದಿದ್ದರು.
ನನ್ನ ಮಗಳ ಮದುವೆಗೆ ಜಯಲಲಿತಾ ಆಗಮಿಸಿದ್ದು ನನ್ನನ್ನು ಅಚ್ಚರಿಯಲ್ಲಿ ಕೆಡವಿತ್ತು ಎಂದು ರಜನೀಕಾಂತ್ ಹೇಳಿದರು. ಇಂತಹ ವಿಶಾಲ ಹೃದಯದ ನಾಯಕಿ ಇಂದು ನಮ್ಮಂದಿಗಿಲ್ಲ ಎಂಬುದು ಬೇಸರದ ವಿಷಯ ಎಂದ ಅವರು, ಅವರು ಕೊಹಿನೂರ್ ವಜ್ರದಂತೆ ಎಂದಿಗೂ ಪ್ರಕಾಶಮಾನವಾಗಿ ಬೆಳಗುವವರು ಎಂದು ನುಡಿನಮನ ಸಲ್ಲಿಸಿದರು.