ರಾಜ್ ಠಾಕ್ರೆಗಿಂತ ದೊಡ್ಡ ಸರ್ಕಾರ ಯಾವುದು?

Update: 2016-12-12 04:02 GMT

ಮುಂಬೈ, ಡಿ.12: ಮುಂದಿನ ವರ್ಷ ತಮ್ಮ 'ರಯೀಸ್' ಚಿತ್ರದ ಬಿಡುಗಡೆ ಹಾದಿಯಲ್ಲಿ ಯಾವುದೇ ತಡೆ ಬರದಂತೆ ಅಭಯ ಪಡೆಯುವ ಸಲುವಾಗಿ ಶಾರುಖ್ ಖಾನ್ ಎಂಎನ್‌ಎಸ್ ಮುಖಂಡನನ್ನು ಭೇಟಿ ಮಾಡಿ ಅಭಯ ಪಡೆದಿದ್ದಾರೆ.
ಪಾಕಿಸ್ತಾನಿ ಕಲಾವಿದರನ್ನು ಬಳಸಿಕೊಳ್ಳುವ ಬಗ್ಗೆ ಸರ್ಕಾರ ನಿರ್ಬಂಧ ಹೇರಿಲ್ಲ. ಅಗತ್ಯಬಿದ್ದರೆ, ಚಿತ್ರದ ಪ್ರಚಾರಕ್ಕಾಗಿ ಮಹಿರಾ ಖಾನ್ ಅವರನ್ನು ಕರೆಸಿಕೊಳ್ಳಲಾಗುವುದು ಎಂದು ರಿತೇಶ್ ಸಿಧ್ವಾನಿ ಹೇಳಿಕೆ ನೀಡಿದ್ದರು. ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ಶಾರುಖ್ ಖಾನ್ ಇದಕ್ಕೆ ಒಪ್ಪಿದ್ದರು. ಇದು ಇನ್ನೊಂದು ಪ್ರತಿಭಟನೆಗೆ ಕಾರಣವಾಗುತ್ತದೆ ಎಂಬ ಗುಲ್ಲೆದ್ದಿತ್ತು.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಕಲಾವಿದರ ಬಗೆಗಿನ ತಮ್ಮ ನಿಲುವನ್ನು ಸ್ಪಷ್ಟಪಡಿಸುವ ಸಲುವಾಗಿಯೇ ಎಸ್‌ಆರ್‌ಕೆ ಇತ್ತೀಚೆಗೆ ಎಂಎನ್‌ಎಸ್ ಮುಖಂಡ ರಾಜ್ ಠಾಕ್ರೆ ಅವರನ್ನು ಅವರ ನಿವಾಸದಲ್ಲೇ ಭೇಟಿ ಮಾಡಿದರು ಎಂದು ಹೇಳಲಾಗಿದೆ. ಸುಮಾರು ಒಂದು ಗಂಟೆ ಕಾಲ ಇಬ್ಬರ ನಡುವೆ ಮಾತುಕತೆ ನಡೆಯಿತು. ಮಹಿರಾ ಅವರನ್ನು ಭಾರತಕ್ಕೆ ಕರೆಸುವ ಪ್ರಶ್ನೆಯೇ ಇಲ್ಲ ಹಾಗೂ ಭವಿಷ್ಯದಲ್ಲಿ ಎಂದೂ ಪಾಕಿಸ್ತಾನಿ ಕಲಾವಿದರ ಜತೆ ಕಾರ್ಯ ನಿರ್ವಹಿಸುವುದಿಲ್ಲ ಎಂದು ಎಸ್‌ಆರ್‌ಕೆ ಭರವಸೆ ನೀಡಿದರು ಎಂದು ತಿಳಿದುಬಂದಿದೆ.
ಎಂಎನ್‌ಎಸ್ ಕಡೆಯಿಂದ ರಯೀಸ್ ಚಿತ್ರದ ಬಗ್ಗೆ ಯಾವ ಪ್ರತಿಭಟನೆಯೂ ಇಲ್ಲ ಎಂದು ಪಕ್ಷದ ಮುಖಂಡ ಅಮೇ ಖೋಪ್ಕರ್ ಸ್ಪಷ್ಟಪಡಿಸಿದ್ದಾರೆ. ರಾಜ್‌ ಠಾಕ್ರೆ, ಮಹಾರಾಷ್ಟ್ರ ಸಿಎಂ ಹಾಗೂ ಚಿತ್ರ ನಿರ್ಮಾಪಕರ ಸಂಘದ ನಡುವೆ ಕಳೆದ ಅಕ್ಟೋಬರ್‌ನಲ್ಲಿ ನಡೆದ ಸಭೆಯಲ್ಲಿ, "ಈಗಾಗಲೇ ಪಾಕಿಸ್ತಾನಿ ಕಲಾವಿದರನ್ನು ಬಳಸಿಕೊಂಡು ಚಿತ್ರೀಕರಣ ಮಾಡಿದ್ದರೆ ಅಂಥ ಚಿತ್ರಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸುವುದಿಲ್ಲ" ಎಂದು ಸ್ಪಷ್ಟಪಡಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಈ ಭೇಟಿಯ ಬಳಿಕ ಎಸ್‌ಆರ್‌ಕೆಯವರ ರಯೀಸ್ ಚಿತ್ರಕ್ಕೆ ಹಸಿರು ನಿಶಾನೆ ಸಿಕ್ಕಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News