ಉಡುಪಿ: ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿಗಳಿಗೆ ಬೆದರಿಕೆ

Update: 2016-12-12 14:54 GMT

ಉಡುಪಿ, ಡಿ.12 :  ನಗರದ ಕೆಎಂ ಮಾರ್ಗದಲ್ಲಿರುವ ಹಾಜಿ ಅಬ್ದುಲ್ಲಾ ಸಾಹೇಬ್ ಸ್ಮಾರಕ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸ್ಟಾಫ್ ಕ್ವಾರ್ಟರ್ಸ್‌ಗಳಲ್ಲಿ ವಾಸ್ತವ್ಯ ಹೂಡಿರುವ ಆಸ್ಪತ್ರೆಯ ಸಿಬ್ಬಂದಿಗಳಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೇ ಮೂರು ದಿನದೊಳಗೆ ನಿವಾಸ ತೆರವುಗೊಳಿಸುವಂತೆ ಜಿಲ್ಲಾಡಳಿತ ಬೆದರಿಕೆ ಒಡ್ಡಿದೆ ಎಂದು ಮಾಜಿ ಶಾಸಕ ಯು.ಆರ್.ಸಭಾಪತಿ ಆರೋಪಿಸಿದ್ದಾರೆ.

ಆಸ್ಪತ್ರೆಯ ಇಬ್ಬರು ಮಹಿಳಾ ವೈದ್ಯರು, ನಾಲ್ವರು ಮಹಿಳಾ ನರ್ಸ್‌ಗಳು ಹಾಗೂ ಏಳು ಮಂದಿ ಡಿ ಗ್ರೂಪ್ ನೌಕರರು ಕೆ.ಎಂ.ಮಾರ್ಗದಲ್ಲಿರುವ ಆಸ್ಪತ್ರೆಯ ಸ್ಟಾಫ್ ಕ್ವಾರ್ಟರ್ಸ್‌ಗಳಲ್ಲಿ ವಾಸಿಸುತ್ತಿದ್ದು, ಇದೀಗ ಯಾವುದೇ ಪರ್ಯಾಯ ವ್ಯವಸ್ಥೆಯಿಲ್ಲದೆ ದಿಢೀರನೆ ಮೂರು ದಿನಗಳ ಒಳಗೆ ತೆರವು ಮಾಡಬೇಕೆಂದು ಜಿಲ್ಲಾಡಳಿತ ಮೌಖಿಕ ಆದೇಶ ನೀಡಿರುವುದು ಖಂಡನೀಯ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಈ ಸಿಬ್ಬಂದಿಗಳಿಗೆ ಡಿ.12ರ ಸೋಮವಾರ ಸಂಜೆಯೊಳಗಾಗಿ ಮನೆ ಖಾಲಿ ಮಾಡದಿದ್ದಲ್ಲಿ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಳಿಸಲಾಗುವುದೆಂದು ಬೆದರಿಕೆ ನೀಡಿರುವುದು ಉಡುಪಿಯ ಜನತೆ ತಲೆ ತಗ್ಗಿಸುವಂತೆ ಮಾಡಿದೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.
 
 ಸರಕಾರದ ಆದೇಶದಂತೆ ಜಿಲ್ಲಾಡಳಿತದಲ್ಲಿ ಯಾವುದೇ ಎಂಒಯು (ಕರಾರು ಪತ್ರ) ನೊಂದಾವಣೆಯಾಗದೆ   ಈ ರೀತಿ ಉಡುಪಿಯ ಒಬ್ಬ ಖಾಸಗಿ ವ್ಯಕ್ತಿಗೆ 60 ವರ್ಷಗಳವರೆಗೆ ಗುತ್ತಿಗೆ ನೀಡುವುದನ್ನು ಉಡುಪಿಯ ಜನತೆ ಸಾರ್ವತ್ರಿಕ ವಾಗಿ ವಿರೋಧಿಸುತ್ತಿದ್ದರೂ,  ಸರಕಾರ ತನ್ನ ಸರ್ವಾಧಿಕಾರದಿಂದ ಬಲಪ್ರಯೋಗ ಮಾಡುತ್ತಿರುವುದನ್ನು ಖಂಡಿಸುವುದು ಅನಿವಾರ್ಯವಾಗಿದೆ ಎಂದವರು ಹೇಳಿದ್ದಾರೆ.

 ಉಡುಪಿಯ ಖ್ಯಾತನಾಮ ವೈದ್ಯರಾದ ಡಾ.ಪಿ.ವಿ.ಭಂಡಾರಿ, ಆರ್‌ಟಿಐ ಮೂಲಕ ಲಿಖಿತವಾಗಿ ಜಿಲ್ಲಾಡಳಿತಕ್ಕೆ ಎಂಒಯು ಕರಾರು ಪತ್ರದ ನಕಲನ್ನು ಕೇಳಿದಾಗ, ಯಾವುದೇ ಎಂಒಯು ಕರಾರುಪತ್ರ ಇನ್ನೂ ನೊಂದಣಿಯಾಗಿರು ವುದಿಲ್ಲವಾದ್ದರಿಂದ ಅದರ ಪ್ರತಿಯನ್ನು ನೀಡಲು ಸಾಧ್ಯವಿಲ್ಲವೆಂದು ಲಿಖಿತವಾಗಿ ಉತ್ತರ ನೀಡಲಾಗಿದೆ.

ಇದನ್ನು ನೋಡುವಾಗ, ಸಂಬಂದ ಪಟ್ಟ ಖಾಸಗಿ ವ್ಯಕ್ತಿಯೊಂದಿಗೆ ಸರಕಾರದ ಪ್ರತಿನಿಧಿಗಳು ಶಾಮೀಲಾಗಿದ್ದು ಕೋಟ್ಯಾಂತರ ರೂ. ಬೆಲೆಬಾಳುವ, ಸರಕಾರಕ್ಕೆ ಹಾಜಿ ಅಬ್ದುಲ್ಲಾ ಸಾಹೇಬ್ ಅವರು ದಾನವಾಗಿ ನೀಡಿರುವ ಮೂರು ಎಕ್ರೆ ಎಂಭತ್ತು ಸೆಂಟ್ಸ್ ಸ್ಥಳವನ್ನು ಖಾಸಗಿ ವ್ಯಕ್ತಿ ಕಬಳಿಸುವ ಹುನ್ನಾರ ನಡೆಸಿರುವುದು ಕಂಡು ಬರುತ್ತದೆ ಎಂದು ಸಭಾಪತಿ ಆರೋಪಿಸಿದ್ದಾರೆ.

 ಇದನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ಕಾನೂನು ಮತ್ತು ಸಾರ್ವಜನಿಕ ವಾಗಿ ಉಗ್ರ ಹೋರಾಟ ನಡೆಸಲಾಗುವುದಲ್ಲದೆ ಪರ್ಯಾಯ ವ್ಯವಸ್ಥೆಯಾಗದೇ ಅಲ್ಲಿಂದ ಯಾವುದೇ ವೈದ್ಯರು, ನರ್ಸ್ ಹಾಗೂ ಡಿ ಗ್ರೂಪ್ ನೌಕರರನ್ನು ಒಕ್ಕಲೆಬ್ಬಿಸಬಾರದೆಂದು ಮಾಜಿ ಶಾಸಕ ಸಭಾಪತಿ ಅಗ್ರಹಿಸಿದ್ದಾರೆ.

ಬದಲಿ ವ್ಯವಸ್ಥೆಯಾಗದೇ ತೆರವು ಇಲ್ಲ: ಜಿಲ್ಲಾ ಸರ್ಜನ್

ಈಗ ಸ್ಟಾಪ್ಟ್ ಕ್ವಾರ್ಟರ್ಸ್‌ನಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಯಾವುದೇ ಕಾರಣಕ್ಕೂ ಅವರನ್ನು ತೆರವುಗೊಳಿಸುವ ಪ್ರಮೇಯವೇ ಇಲ್ಲ ಎಂದು ಉಡುಪಿ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಮಧುಸೂದನ್ ನಾಯಕ್ ಭರವಸೆ ನೀಡಿದ್ದಾರೆ.

ಆಸ್ಪತ್ರೆಗೆ ಸಂಬಂಧಿಸಿದಂತೆ ತಿಂಗಳ ಪ್ರಾರಂಭದಲ್ಲಿ ಜಿಲ್ಲಾಧಿಕಾರಿ ಕರೆದ ಸಭೆಯಲ್ಲಿ, ಶೀಘ್ರದಲ್ಲೇ ಆಸ್ಪತ್ರೆಯ ವಸತಿಗೃಹದಲ್ಲಿರುವವರು ನಿವಾಸವನ್ನು ತೆರವುಗೊಳಿಸಬೇಕಾಗುತ್ತದೆ ಎಂದು ಸೂಚನೆ ನೀಡಿದ್ದರು. ಆಗಲೇ ತಾನು ಅವರಿಗೆ ಬದಲಿ ವ್ಯವಸ್ಥೆ ಕಲ್ಪಿಸದೇ ಅಲ್ಲಿಂದ ತೆರವು ಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದೆ ಎಂದರು.

ಇಂದು ತಾನು ಸಿಬ್ಬಂದಿಗಳನ್ನು ಕಂಡು ಮಾತನಾಡಿದ್ದು, ಅವರಿಗೆ ಈ ಬಗ್ಗೆ ಭರವಸೆ ನೀಡಿರುವುದಾಗಿ ತಿಳಿಸಿದರು. ಅವರಿಗೆ ಬದಲಿ ನಿವಾಸವನ್ನು ನೀಡಲಾಗುವುದು ಅಥವಾ ಬದಲಿ ವ್ಯವಸ್ಥೆಯನ್ನು ಕಲ್ಪಿಸಿದ ಬಳಿಕವಷ್ಟೇ ಅಲ್ಲಿಂದ ಖಾಲಿ ಮಾಡಿಸಲಾಗುವುದು. ಇಲ್ಲದಿದ್ದರೆ ಆಸ್ಪತ್ರೆಯ ದೈನಂದಿನ ಚಟುವಟಿಕೆಗೆ ತೊಂದರೆ ಎದುರಾಗುವುದು ಎಂದು ಡಾ.ನಾಯಕ್ ತಿಳಿಸಿದರು.

ಆಸ್ಪತ್ರೆ ಕಾಮಗಾರಿ ಆರಂಭಕ್ಕೆ ಮುನ್ನ ಹಲವು ಪರವಾನಿಗೆ ಪಡೆಯಲು ಕಾಲಾವಕಾಶ ಬೇಕಾಗುವುದರಿಂದ, ಅಷ್ಟರೊಳಗೆ ಅವರಿಗೆ ಬದಲಿ ವ್ಯವಸ್ಥೆ ಕಲ್ಪಿಸಿ ಖಾಲಿ ಮಾಡಿಸಲಾಗುವುದು ಎಂದೂ ಸರ್ಜನ್ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News