ಮಂಗಳೂರು ಪ್ರೆಸ್ ಕ್ಲಬ್ ನಿಂದ ವಿಶೇಷ ಸಾಧಕರಿಗೆ ಪ್ರಶಸ್ತಿ

Update: 2016-12-13 11:56 GMT

ಮಂಗಳೂರು, ಡಿ.13 : ಗ್ರಾಮೀಣ ಪ್ರದೇಶದಲ್ಲಿ ಅವಕಾಶ ವಂಚಿತರಿಗೆ ಶೈಕ್ಷಣಿಕ ಸೇವೆ ನೀಡುವ ಮೂಲಕ ವಿಶೇಷ ಸಾಧನೆ ಮಾಡಿದ ಮಂಗಳೂರು ನಿವಾಸಿಗಳಾದ ರೆನಿಟ ಮತ್ತು ಶಮಿತ ಹಾಗೂ ಕಡಬ ನಿವಾಸಿಗಳಾದ ಫೌಝಿಯ ಮತ್ತು ಸಮೀರಾ. ಕೆ. ಎಂಬ ನಾಲ್ವರು ಯುವತಿಯರಿಗೆ ಈ ಬಾರಿಯ (2016-17ನೇ ಸಾಲಿನ) ’ಪ್ರೆಸ್‌ಕ್ಲಬ್ ಪ್ರಶಸ್ತಿ’ಯನ್ನು ನೀಡಲು ಆಯ್ಕೆಮಾಡಲಾಗಿದೆ.

ಪ್ರೊ.ಬಿ.ಎ.ವಿವೇಕ ರೈ ಅಧ್ಯಕ್ಷತೆಯ, ಸದಾನಂದ ಸುವರ್ಣ ಮತ್ತು ಪ್ರೊ.ರೀಟಾ ನರೋನ್ಹ ಅವರನ್ನು ಒಳಗೊಂಡ ನಿರ್ಣಾಯಕ ಮಂಡಳಿ ಈ ನಾಲ್ವರು ಯುವತಿಯರನ್ನು ‘ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ’ಗೆ ಆಯ್ಕೆ ಮಾಡಿದೆ.

ವೃತ್ತಿ ಆಯ್ಕೆಯಲ್ಲಿ ವಿಭಿನ್ನತೆ, ಸ್ವಾವಲಂಬಿ ಬದುಕಿಗಾಗಿ ತುಡಿತ, ಉದ್ಯಮ ಶೀಲತೆ, ಮನೋಸ್ಥೈರ್ಯ ಮತ್ತು ಮಹಿಳೆ ಎಂಬ ಅಂಶಗಳನ್ನು ಪರಿಗಣಿಸಿ ಈ ನಾಲ್ವರು ಯುವತಿಯರನ್ನು ಪ್ರಶಸ್ತಿಗೆ ಪರಿಗಣಿಸಿರುವುದಾಗಿ ಅಭಿಪ್ರಾಯ ಪಟ್ಟಿರುವ ನಿರ್ಣಾಯಕ ಮಂಡಳಿ, ಈ ಆಯ್ಕೆ ಸಮಾಜಕ್ಕೆ ಹೊಸ ಸಂದೇಶವೊಂದನ್ನು ರವಾನಿಸಲಿದೆ ಎಂದು ಹೇಳಿದೆ.

ಡಿ.18ರಂದು ಬೆಳ್ಳಿಗೆ 10:30ಕ್ಕೆ ಲಾಲ್ ಬಾಗ್‌ನ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಭವನ ಹಾಲ್‌ನಲ್ಲಿ ಜರುಗಲಿರುವ ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಪ್ರಶಸ್ತಿ ಪ್ರದಾನ ಮಾಡುವರು. ಪ್ರಶಸ್ತಿಯು ರೂ.10,001 ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಯಥೋಪಚಾರಗಳನ್ನು ಒಳಗೊಂಡಿರುತ್ತದೆ ಎಂದು ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೆನಿಟ-ಶಮಿತ ಎರಡು ದಶಕಗಳ ಶೈಕ್ಷಣಿಕ ಸೇವೆ

ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಕಾಲೇಜಿನಿಂದ 1995ರಲ್ಲಿ ಪದವಿ ಶಿಕ್ಷಣ ಪಡೆದ ರೆನಿಟ ಮತ್ತು ಶಮಿತ ಎರಡು ದಶಕಗಳಿಂದಲೂ ಎಲ್.ಕೆ.ಜಿ ಯಿಂದ ಪದವಿ ಪೂರ್ವ ಕಾಲೇಜುವರೆಗೆ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಅವಕಾಶ ವಂಚಿತರಿಗೆ ಶೈಕ್ಷಣಿಕ ಸೇವೆ ನೀಡುತ್ತಾ ಬಂದಿದ್ದಾರೆ. 1996ರಲ್ಲಿ ಈ ಇಬ್ಬರು ಯುವತಿಯರು ಬೆಂಗಳೂರು ಸಮಿಪದ ರಾಮನಗರದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೇವೆ ನೀಡಲು ಆರಂಭಸಿದರು. ಆ ಶಾಲೆ ಕೆಲಕಾಲದಲ್ಲಿ ಕಾರಣಾಂತರಗಳಿಂದ ಮುಚ್ಚಿತು.

ನಂತರ ಇವರು ಕುಂದಪುರ ತಾಲೂಕಿನ ಕೇಂದ್ರಭಾಗದಿಂದ 30.ಕಿ.ಮೀ ದೂರದ ಸಿದ್ಧಾಪುರ ರಸ್ತೆಯ ಪಕ್ಕದಲ್ಲಿರುವ ಶಂಕರ ನಾರಾಯಣ ಎಂಬ ಹಳ್ಳಿಯಲ್ಲಿ ಎಲ್.ಕೆ.ಜಿ ಮತ್ತು ಒಂದನೆ ತರಗತಿಯನ್ನು ಅಂಗನವಾಡಿ ಕೇಂದ್ರವೊಂದರ ಬಳಿ ಆರಂಭಿಸಲು ನಿರ್ಧರಿಸಿದರು. ಅಲ್ಲಿ ಸ್ಥಳಾವಕಾಶದ ಕೊರತೆ ಇತ್ತು. ಈ ಬಗ್ಗೆ ಶಂಕರ ನಾರಾಯಣ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಭೇಟಿಯಾದರು. ಅವರು ಅಲ್ಲಿನ ಜಿ.ಎಸ್.ಆಚಾರ್ಯ ರಂಗ ಮಂದಿರವನ್ನು 300ರೂ.ಗಳ ತಿಂಗಳ ಬಾಡಿಗೆಯ ಆಧಾರದಲ್ಲಿ ಇವರಿಗೆ ಶಾಲೆ ಆರಂಭಿಸಲು ಅವಕಾಶ ನೀಡಿದರು. ಈ ರೀತಿ 1998ರಲ್ಲಿ 12 ವಿದ್ಯಾರ್ಥಿಗಳೊಂದಿಗೆ ಆರಂಭವಾದ ’ಮದರ್ ತೆರೇಸಾ’ ಹೆಸರಿನ ಶಾಲೆ ಎಲ್.ಕೆ.ಜಿಯಿಂದ ಪ್ರಸಕ್ತ ಪದವಿ ಪೂರ್ವ ಶಿಕ್ಷಣದವರೆಗೆ 1050 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಂಸ್ಥೆಯಾಗಿ ಬೆಳೆದಿದೆ. ಆಸುಪಾಸಿನ 42 ಗ್ರಾಮಗಳ ವಿದ್ಯಾರ್ಥಿಗಳು, ಮಂಗಳೂರು, ಶಿವಮೊಗ್ಗ, ಬೆಂಗಳೂರಿನಿಂದ ಬಂದು ನೆಲೆಸಿರುವ ಕೂಲಿಕಾರ್ಮಿಕರ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಶಾಲೆ ಬಿಟ್ಟ ವಿದ್ಯಾರ್ಥಿಗಳಿಗೆ ಕಾಲೇಜು ಸ್ಥಾಪಿಸಿದ ಫೌಝಿಯ ಮತ್ತು ಸಮೀರ. ಕೆ

 ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಡಬ ಫೌಝಿಯ ಮತ್ತು ಸಮೀರ. ಕೆ ಎಂಬ ಇಬ್ಬರು ಯುವತಿಯರು 2012ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತಮ್ಮ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಮುಗಿಸಿ ಮಂಗಳೂರು ಕೇಂದ್ರದಿಂದ 70.ಕಿ.ಮೀ ದೂರದ ಕಡಬದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಶಾಲೆ ತೊರೆದು ಮನೆಯಲ್ಲಿರುವ ವಿದ್ಯಾರ್ಥಿಗಳಿಗೆ ಶಾಲೆಯೊಂದನ್ನು ಆರಂಭಿಸಲು ಸುಂದರ ಮಂಡೆಕರ ಎಂಬವರ ಸಣ್ಣ ಕಟ್ಟಡದಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದು ಎಸೆಸೆಲ್ಸಿ, ಪಿಯುಸಿಯಲ್ಲಿ ಶಾಲೆ ತೊರೆದು ಶಿಕ್ಷಣ ಮುಂದುವರಿಸಲು ಇಚ್ಛೆಹೊಂದಿದ್ದ ವಿದ್ಯಾರ್ಥಿಗಳನ್ನು ಸೇರಿಸಿ ’ಏಮ್ಸ್’ ಶಾಲೆ ಆರಂಭಿಸಿದರು.

ಅವರ ಪಿಯುಸಿ ಶಿಕ್ಷಣದ ನಂತರ ಶಿಕ್ಷಣ ಮುಂದುವರಿಸಲು ಇಚ್ಛೆ ವ್ಯಕ್ತಪಡಿಸಿದಾಗ ಇವರು ಕಾಲೇಜು ಆರಂಭಿಸಲು ತೀರ್ಮಾನಿಸಿದರು. ಆರ್ಥಿಕ ಬಲವಿಲ್ಲದಿದ್ದರೂ ಕೇವಲ ಇಚ್ಛಾಶಕ್ತಿಯಿಂದ ಡಿಗ್ರಿ ಕಾಲೇಜು ಆರಂಭಿಸಲು ಮಂಗಳೂರು ವಿಶ್ವವಿದ್ಯಾನಿಲಯದ ಅನುಮತಿ ಕೋರಿದರು. 2013ರಲ್ಲಿ ಕಾಲೇಜುಆರಂಭಿಸಲು ಅನುಮತಿ ದೊರೆಯಿತು.

180 ವಿದ್ಯಾರ್ಥಿಗಳೊಂದಿಗೆ ಕಡಬದಲ್ಲಿ ’ಏಮ್ಸ್’ (AIMS) ಪ್ರಥಮ ದರ್ಜೆ ಕಾಲೇಜು ಆರಂಭಗೊಂಡಿತು. ಪ್ರಸಕ್ತ ಕಡಬ ಪರಿಸರದಲ್ಲಿ ಅವಕಾಶ ವಂಚಿತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ. ಯಾವೂದೇ ಆರ್ಥಿಕ ಸಂಪನ್ಮೂಲ ಹೊಂದದೆ ಇದ್ದ ಈ ಯುವತಿಯರು ಏನನ್ನಾದರೂ ಒಳ್ಳೆಯ ಕೆಲಸ ಮಾಡಿ ಸಾಧಿಸಬೇಕು ಎಂಬ ಛಲ ಹೊಂದಿದ್ದ ಕಾರಣ ನಿಸ್ವಾರ್ಥವಾಗಿ ಶೈಕ್ಷಣಿಕ ಸೇವೆ ಮಾಡುತ್ತಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ದೊರಕಿಸಿ ಕೊಡಲು ಪ್ರಯತ್ನಿಸುವುದರೊಂದಿಗೆ, ಸ್ಥಳಿಯರಿಗೂ ಕೌಶಲ್ಯಾಭಿವೃದ್ಧಿಯ ತರಬೇತಿ ಕೇಂದ್ರವಾಗಿ ಈ ಕೇಂದ್ರ ಶಾಲೆ ಬಿಟ್ಟ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣ ನೀಡುವ ಕೇಂದ್ರವಾಗಿ ಬೆಳೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News