ಅಲೆಪ್ಪೊದಲ್ಲಿ ನಾಗರಿಕರ ಮೇಲೆ ದೌರ್ಜನ್ಯ: ಮೂನ್ ಕಳವಳ
ಅಲೆಪ್ಪೊ, ಡಿ. 13: ಅಲೆಪ್ಪೊಗಾಗಿನ ಯುದ್ಧವು ಅಂತಿಮ ಹಂತವನ್ನು ಪ್ರವೇಶಿಸಿರುವಂತೆಯೇ, ನಾಗರಿಕರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಸೋಮವಾರ ಕಳವಳ ವ್ಯಕ್ತಪಡಿಸಿದ್ದಾರೆ.
‘‘ಅಲೆಪ್ಪೊದಲ್ಲಿ ಇತ್ತೀಚಿನ ಗಂಟೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಭಾರೀ ಸಂಖ್ಯೆಯ ನಾಗರಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕುರಿತ ವರದಿಗಳಿಂದ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಕಳವಳಗೊಂಡಿದ್ದಾರೆ’’ ಎಂದು ಅವರ ವಕ್ತಾರ ಸ್ಟೀಫನ್ ಡುಜರಿಕ್ ಹೇಳಿದ್ದಾರೆ.
‘‘ಈ ವರದಿಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ವಿಶ್ವಸಂಸ್ಥೆಗೆ ಸಾಧ್ಯವಾಗುತ್ತಿಲ್ಲ, ಆದರೆ, ಸಂಬಂಧಪಟ್ಟ ಬಣಗಳಿಗೆ ಮಹಾಕಾರ್ಯದರ್ಶಿ ತನ್ನ ಕಳವಳವನ್ನು ವ್ಯಕ್ತಪಡಿಸಿದ್ದಾರೆ’’ ಎಂದು ಅವರು ತಿಳಿಸಿದರು.
ಮಹತ್ವದ ಉತ್ತರದ ನಗರ ಅಲೆಪ್ಪೊಗಾಗಿ ನಡೆಯುತ್ತಿರುವ ಕಾಳಗ ‘ಅಂತಿಮ ಹಂತ’ದಲ್ಲಿದೆ ಎಂಬುದಾಗಿ ಸಿರಿಯದ ಸರಕಾರಿ ಪಡೆಗಳು ಹೇಳಿವೆ. ಸರಕಾರಿ ಪಡೆಗಳು ಮುಂದೊತ್ತಿ ಬರುತ್ತಿರುವಂತೆಯೇ, ನಗರದಲ್ಲಿರುವ ಬಂಡುಕೋರರು ಹಿಮ್ಮೆಟ್ಟಿ ತಮ್ಮ ಹಿಂದಿನ ನೆಲೆಗಳಿಗೆ ಮರಳುತ್ತಿದ್ದಾರೆ.