ಅಮೆರಿಕ: ವಿದೇಶಾಂಗ ಕಾರ್ಯದರ್ಶಿ ಹುದ್ದೆಗೆ ಎಕ್ಸಾನ್ ಮೊಬೈಲ್ ಸಿಇಒ ರೆಕ್ಸ್ ಟಿಲರ್‌ಸನ್?
ವಾಶಿಂಗ್ಟನ್, ಡಿ. 13: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಹತ್ವದ ವಿದೇಶಾಂಗ ಕಾರ್ಯದರ್ಶಿ ಹುದ್ದೆಗೆ ಎಕ್ಸಾನ್ ಮೊಬೈಲ್‌ನ ಸಿಇಒ ರೆಕ್ಸ್ ಟಿಲರ್‌ಸನ್‌ರನ್ನು ಆಯ್ಕೆ ಮಾಡಿದ್ದಾರೆ ಎಂಬುದಾಗಿ ಟ್ರಂಪ್ ತಂಡದ ಇಬ್ಬರು ಸದಸ್ಯರು ಸೋಮವಾರ ರಾತ್ರಿ ಹೇಳಿದ್ದಾರೆ.
ಈ ಹುದ್ದೆ ಭರ್ತಿಗೆ ಸುದೀರ್ಘ ಸಮಯದಿಂದ ಪ್ರಕ್ರಿಯೆಗಳು ಸಾಗುತ್ತಿವೆ. ಹಲವು ಸಂದರ್ಭಗಳಲ್ಲಿ ಈ ವಿಷಯವು ಟ್ರಂಪ್ ತಂಡದಲ್ಲಿ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿದ್ದವು.
ಆದಾಗ್ಯೂ, ಟಿಲರ್‌ಸನ್ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗೆ ಸಂಪರ್ಕಗಳನ್ನು ಹೊಂದಿರುವುದು ಕೆಲವು ವಲಯಗಳಲ್ಲಿ ಆಕ್ರೋಶಕ್ಕೂ ಕಾರಣವಾಗಿದೆ. ಅಮೆರಿಕದ ಸಂಸತ್ತು ಕಾಂಗ್ರೆಸ್ ತನ್ನ ಆಯ್ಕೆಯನ್ನು ಅನುಮೋದಿಸುವಂತೆ ಮಾಡಲು ಟ್ರಂಪ್ ಗುದ್ದಾಡಬೇಕಾಗಬಹುದು.
ಟಿಲರ್‌ಸನ್ ಜೊತೆ ಶನಿವಾರ ವಾರದಲ್ಲಿ ಎರಡನೆ ಬಾರಿ ಮಾತುಕತೆ ನಡೆಸಿದ ಬಳಿಕ ಅವರ ನೇಮಕವನ್ನು ಅಂತಿಮಗೊಳಿಸುವ ನಿರ್ಧಾರಕ್ಕೆ ಟ್ರಂಪ್ ಬಂದರು ಎನ್ನಲಾಗಿದೆ.
ಅಂತಾರಾಷ್ಟ್ರೀಯ ಉದ್ಯಮಿಯೊಬ್ಬರು ದೇಶದ ಅತ್ಯುನ್ನತ ರಾಜತಾಂತ್ರಿಕರಾಗಿ ಸೇವೆ ಸಲ್ಲಿಸುವುದನ್ನು ನೋಡಲು ಟ್ರಂಪ್ ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
ಆದರೆ, ಟಿಲರ್‌ಸನ್‌ರನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸುವ ಸಾಧ್ಯತೆಗೆ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ‘‘ವಿದೇಶಾಂಗ ಕಾರ್ಯದರ್ಶಿಯಲ್ಲಿ ನಾನು ಅಪೇಕ್ಷಿಸುವ ಗುಣಗಳಲ್ಲಿ ‘ವ್ಲಾದಿಮಿರ್‌ರ ಸ್ನೇಹಿತರಾಗಿರುವುದು’ ಸೇರಿಲ್ಲ’’ ಎಂದು ಸೆನೆಟರ್ ಮಾರ್ಕೊ ರೂಬಿಯೊ ಟ್ವೀಟ್ ಮಾಡಿದ್ದಾರೆ.
ಎಕ್ಸಾನ್ ಮೊಬೈಲ್‌ನ ಮುಖ್ಯಸ್ಥರಾಗಿ ಟಿಲರ್‌ಸನ್ ರಶ್ಯದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು. ಅವರಿಗೆ 2013ರಲ್ಲಿ ರಶ್ಯ ಅಧ್ಯಕ್ಷ ಪುಟಿನ್ ‘ಆರ್ಡರ್ ಆಫ್ ಫ್ರೆಂಡ್‌ಶಿಪ್’ ಪ್ರಶಸ್ತಿಯನ್ನು ನೀಡಿದ್ದರು. ಇದು ವಿದೇಶಿ ಪ್ರಜೆಯೊಬ್ಬರಿಗೆ ರಶ್ಯ ನೀಡುವ ಉನ್ನತ ಗೌರವವಾಗಿದೆ.
‘‘ಹೆಚ್ಚಿನ ಜಾಗತಿಕ ವ್ಯಕ್ತಿಗಳು ಅವರಿಗೆ ಚೆನ್ನಾಗಿ ಗೊತ್ತಿರುವುದು ದೊಡ್ಡ ಪ್ರಯೋಜನವಾಗಿದೆ. ಅವರು ರಶ್ಯದಲ್ಲಿ ಭಾರಿ ವ್ಯವಹಾರಗಳನ್ನು ಮಾಡುತ್ತಾರೆ. ಅವರು ಕಂಪೆನಿಗಾಗಿ ಭಾರೀ ವ್ಯವಹಾರಗಳನ್ನು ನಡೆಸುತ್ತಾರೆ’’ ಎಂದು ಟ್ರಂಪ್ ಹೇಳಿದ್ದಾರೆ.